ಜಿಲ್ಲೆ

ಕ್ರಿಕೆಟ್: ಕರಡ ಬುಲ್ಸ್ ಚಾಂಪಿಯನ್

ಮಡಿಕೇರಿ: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ ೩ನೇ ವರ್ಷದ ವಿಪ್ರ ಕ್ರೀಡೋತ್ಸವ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಭಾನುವಾರ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಕರಡ ಬುಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ರನ್ನರ್ಸ್ ಪ್ರಶಸ್ತಿಯನ್ನು ವೀರಾಜಪೇಟೆ ಈಗಲ್ಸ್ ತಂಡ ಪಡೆದುಕೊಂಡಿತು. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರಡ ಬುಲ್ಸ್ ತಂಡ ನಿಗದಿತ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ಭರ್ಜರಿ ೧೦೩ ರನ್‌ಗಳಿಸಿತು. ತಂಡದ ಪರ ಹರಿಪ್ರಸಾದ್ ೫ ಸಿಕ್ಸರ್ ಗಳೊಂದಿಗೆ ೫೨ ಹಾಗೂ ಪ್ರದೀಪ್ ೪೨ ರನ್‌ಗಳನ್ನು ಗಳಿಸಿದರು. ಇದನ್ನು ಬೆನ್ನಟ್ಟಿದ ವೀರಾಜಪೇಟೆ ಈಗಲ್ಸ್ ತಂಡ ೬ ಓವರ್‌ಗಳಲ್ಲಿ ೬ ವಿಕೆಟ್‌ಗಳನ್ನು ಕಳೆದುಕೊಂಡು ೪೦ ರನ್‌ಗಳನಷ್ಟೆ ಗಳಿಸಿ ಸೋಲನುಭವಿಸಿತು. ಕರಡ ತಂಡವು ಈ ಮೂಲಕ ಸತತ ೩ ನೆ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪಂದ್ಯಾವಳಿಯಲ್ಲಿ ಒಟ್ಟು ೮ ತಂಡಗಳು ಪಾಲ್ಗೊಂಡಿದ್ದವು.

ಜಿಲ್ಲೆಯ ಬ್ರಾಹ್ಮಣ ಮಹಿಳೆಯರಿಗೆ ಹಾಗೂ ಪುರುಷರಿಗೆ ಆಯೋಜಿತ ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ವಕೀಲ ಬ್ರಹ್ಮಾಸ್ ಮಡಿಕೇರಿ ಹಾಗೂ ಮಹಿಳೆಯರ ವಿಭಾಗದಲ್ಲಿ ಗುಡ್ಡೆಹಿತ್ಲು ತಂಡ ಪ್ರಶಸ್ತಿ ಪಡೆದುಕೊಂಡಿತು. ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಗೋಣಿಕೊಪ್ಪ ಹಾಗೂ ಕುಶಾಲನಗರ, ಬ್ರಾಹ್ಮಣರ ಸಂಘ ಸೋಮವಾರಪೇಟೆ ಹಾಗೂ ವೀರಾಜಪೇಟೆ ಸಂಘಗಳು ಕ್ರೀಡಾಕೂಟಕ್ಕೆ ಸಹಕಾರ ನೀಡಿದವು.

ಸಮಾಜದಲ್ಲಿ ಒಗ್ಗಟ್ಟು ಅಗತ್ಯ: ಸಮಾಜದಲ್ಲಿ ಇಂದು ಒಗ್ಗಟ್ಟು ಇಲ್ಲದಿದ್ದರೆ ಏನೂ ಕೂಡ ಸಾಧಿಸಲು ಸಾಧ್ಯವಿಲ್ಲ ಎಂದು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಅಭಿಪ್ರಾಯಪಟ್ಟರು.

ವಿಪ್ರ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಇಂದಿನ ಪಂದ್ಯದಲ್ಲಿ ಸಮಾಜದ ಬಾಂಧವರು ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಈ ಒಗ್ಗಟ್ಟನ್ನು ಸದುಪಯೋಗಿಸಿಕೊಂಡು ಬ್ರಾಹ್ಮಣ ಸಮಾಜದ ಸಂಘಟನೆಯತ್ತ ಗಮನಹರಿಸಬೇಕು. ಧ್ಯಾನ, ಸಮಾಧಾನದಿಂದ ಮಾತ್ರವಷ್ಟೆ ಸಮಾಜದಲ್ಲಿನ ದುಷ್ಟಶಕ್ತಿಗಳನ್ನು ಎದುರಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಎಲ್ಲರೂ ಒಂದಾಗಿ ಸಂಘಟಿತವಾಗಿ ಹೋರಾಡುವ ಅಗತ್ಯವಿದೆ ಎಂದು ಹೇಳಿದರು.

ಮಡಿಕೇರಿ ಕೊಡಗು ವಿದ್ಯಾಲಯದ ಸಮಿತಿ ಸದಸ್ಯ ಗುರುದತ್ ಮಾತನಾಡಿ, ಆರೋಗ್ಯಕರವಾಗಿರಲು ಕ್ರಿಕೆಟ್ ಕ್ರೀಡೆ ಸಹಕಾರಿಯಾಗಿದೆ. ವಿದ್ಯಾಭಿವೃದ್ಧಿ ನಿಧಿ ಶತಮಾನಭವನವನ್ನು ನಿರ್ಮಿಸಿದ್ದಲ್ಲದೆ ೩ನೇ ವರ್ಷದ ಕ್ರೀಡಾಕೂಟವನ್ನೂ ಆಯೋಜಿಸಿ ಯಶಸ್ಸು ಕಂಡಿದೆ. ನನ್ನ ತಂದೆ ಸಿ.ವಿ.ಶಂಕರ್ ಅವರು ಜನರಲ್ ತಿಮ್ಮಯ್ಯ ಮೈದಾನದಲ್ಲಿ ಕೊಡಗಿನ ಹಲವಾರು ಕ್ರೀಡಾಪಟುಗಳಿಗೆ ಹಾಕಿ ಹಾಗೂ ಕ್ರಿಕೆಟ್ ತರಬೇತಿ ನೀಡಿದ್ದು, ಇಂದು ಹಲಾವರು ಕ್ರೀಡಾಪಟುಗಳು ಭಾರತ ತಂಡದ ಪರವೂ ಆಡಿದ್ದಾರೆ. ಇನ್ನು ಕೆಲ ಮಂದಿ ಉದ್ಯೋಗಗಳನ್ನೂ ಪಡೆದುಕೊಂಡಿದ್ದಾರೆ. ಅವರ ನೆನಪಿಗೆ ಈ ಮೈದಾನದಲ್ಲಿನ ಗ್ಯಾಲರಿಗೆ ಅವರ ಹೆಸರನ್ನು ಇಡಲು ಈ ಹಿಂದೆ ಅನುರಾಗ್ ತಿವಾರಿ ಅವರು ಜಿಲ್ಲಾಧಿಕಾರಿ ಆಗಿದ್ದಾಗಲೇ ನಿಶ್ಚಯಿಸಲಾಗಿತ್ತು. ಆದರೆ ಇಂದಿಗೂ ಕೂಡ ಅದು ಈಡೇರಿಲ್ಲ. ಮೈದಾನ ನಿರ್ವಹಣೆಯೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂದು ದೂರಿದರು.

ಮೈದಾನದ ಮಧ್ಯದಲ್ಲಿ ಚರಂಡಿ ನಿರ್ಮಿಸಿ ಕ್ರಿಕೆಟ್ ಆಟ ಆಡಲು ಕಷ್ಟಕರ ಮಾಡಲಾಗಿದೆ. ವಾಹನಗಳನ್ನು ಒಳಗೆ ನಿಲ್ಲಿಸಿ ಮೈದಾನದ ಗುಣಮಟ್ಟವನ್ನು ಹಾಳು ಮಾಡಲಾಗಿದೆ. ಈ ಮೈದಾನವನ್ನು ಕ್ರಿಕೆಟ್‌ಗೆ ಮೀಸಲಿಟ್ಟು ಬದಿಯಲ್ಲಿ ಅಭ್ಯಾಸ ಪಿಚ್‌ಗಳನ್ನು ನಿರ್ಮಿಸುವಂತಾಗಬೇಕು. ಹಾಕಿಗೆ ಇನ್ನೊಂದು ಮೈದಾನವಿದೆ. ಅದನ್ನೂ ಅಭಿವೃದ್ಧಿಪಡಿಸುವಂತಾಗಬೇಕು ಎಂದರು.

ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ಕ್ರೀಡಾಸ್ಫೂರ್ತಿಯೊಂದಿಗೆ ಕ್ರೀಡಾಪಟುಗಳು ಭಾಗವಹಿಸಿ ಪಂದ್ಯಾಟದ ಯಶಸ್ಸಿಗೆ ಶ್ರಮವಹಿಸುವಂತೆ ಸಲಹೆ ಇತ್ತರು.

ಕ್ರೀಡೋತ್ಸವದ ಕ್ರೀಡಾ ಸಂಚಾಲಕ ಗೋಪಾಲಕೃಷ್ಣ ಮಾತನಾಡಿ, ವಿಪ್ರ ಕ್ರೀಡೋತ್ಸವವು ಸಮಾಜದ ಸಂಘಟನೆಗೆ ಅತ್ಯುತ್ತಮ ವೇದಿಕೆ. ಕಳೆದ ೩ ವರ್ಷಗಳಿಂದ ಅತ್ಯುತ್ತಮವಾಗಿ ಕ್ರೀಡೋತ್ಸವ ನಡೆಯುತ್ತಿದೆ. ಮುಂದೆ ಯುವಕ-ಯುವತಿಯರು ಮುನ್ನಡೆಸುತ್ತಾ ಸಾಗಬೇಕೆಂದರು.

ವಿದ್ಯಾಭಿವೃದ್ಧಿ ನಿಧಿ ನಿರ್ದೇಶಕ ಬಿ.ಕೆ.ಜಗದೀಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಈ ಸಂದರ್ಭ ಸಮಾಜದ ಹಿರಿಯರಾದ ಜಿ.ಟಿ.ರಾಘವೇಂದ್ರ, ವಿದ್ಯಾಭಿವೃದ್ಧಿ ನಿಧಿಯ ಉಪಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಬಿ.ಕೆ.ಅರುಣ್ ಕುಮಾರ್, ಸಹ ಕಾರ್ಯದರ್ಶಿ ಎ.ವಿ.ಮಂಜುನಾಥ್, ಖಜಾಂಚಿ ಜಿ.ಆರ್.ರವಿಶಂಕರ್, ಲಲಿತಾ ರಾಘವನ್, ಸವಿತಾ ಭಟ್ ಇತರರು ಇದ್ದರು. ಕ್ರೀಡಾಕೂಟ ವಿಜೇತರಿಗೆ ಟ್ರೋಫಿ ಪ್ರದಾನ, ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಜನವರಿಯಲ್ಲಿ ನಡೆಯಲಿದೆ.