ಜಿಲ್ಲೆ

ಕ್ರಿಕೆಟ್ ಬೆಟ್ಟಿಂಗ್, ಮೂವರ ಬಂಧನ

ಹುಬ್ಬಳ್ಳಿ: ದುಪ್ಪಟ್ಟು ಹಣ ಕೊಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಇಲ್ಲಿನ ಕೇಶ್ವಾಪುರ ಜನತಾ ಕಾಲನಿಯಲ್ಲಿ ಸೋಮವಾರ ರಾತ್ರಿ ಮೊಬೈಲ್​ಫೋನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು, 1.34 ಲಕ್ಷ ರೂ. ನಗದು ಹಾಗೂ 2 ಮೊಬೈಲ್​ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಗದಗ ರಸ್ತೆ ರೈಲ್ವೆ ಕ್ವಾರ್ಟರ್ಸ್ ಕಾಲನಿ ನಿವಾಸಿ, ಆಟೋ ಚಾಲಕ ಶಿವರಾಮಕೃಷ್ಣ ನಾಂಚರಯ್ಯ (36), ಗಾಂಧಿವಾಡ ಸ್ಲಮ್ ನಿವಾಸಿ ರಾಜೇಂದ್ರ ಪ್ರಭುದಾಸ ಅಕ್ಕಿದಾಸರಿ (35) ಹಾಗೂ ಚಾಲುಕ್ಯನಗರ ನಿವಾಸಿ ಪೇಂಟರ್ ರಾಜಾರಾವ್ ಜೋಸೆಫ್ ಪಾಪತಿನಿ (47) ಬಂಧಿತರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಾವಳಿ ಮೇಲೆ ಬೆಟ್ಟಿಂಗ್ ಅಡುತ್ತಿದ್ದರು. ಮೊಬೈಲ್​ಫೊನ್​ನಲ್ಲಿ ಅಂಕಿ-ಸಂಖ್ಯೆಗಳನ್ನು ಬರೆದುಕೊಂಡು ವಿಕೆಟ್, ರನ್​ಗಳ ಮೇಲೆ ಬೆಟ್ಟಿಂಗ್ ಆಡುತ್ತಿದ್ದರು. ಕೇಶ್ವಾಪುರ ಠಾಣೆ ಇನ್ಸ್​ಪೆಕ್ಟರ್ ಸುರೇಶ ಕುಂಬಾರ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕು ಇರಿದ ಆರೋಪಿ ಅಂದರ್

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಹಳೇ ಹುಬ್ಬಳ್ಳಿ ಸದಾಶಿವನಗರದಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಚಾಕು ಇರಿತ ಪ್ರಕರಣದ ಆರೋಪಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಕಾಪುರ ಚೌಕ ನಿವಾಸಿ ಶೋಯೇಬ ಅಬ್ಬಾನವರ (24)ಗೆ ಹಲ್ಲೆಗೀಡಾದವನು. ಸದಾಶಿವನಗರ ನಿವಾಸಿ ಸಾಗರ ಬಸವರಾಜ ಲಕ್ಕುಂಡಿ ಬಂಧಿತ ಆರೋಪಿ. ಸಾಗರ ಸಹಚರ ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.

ನಡೆದ್ದೇನು ?: ಶೋಯೇಬ ಟಾಟಾ ಏಸ್ ತೆಗೆದುಕೊಂಡು ಬಂಕಾಪುರ ಚೌಕ ಕಡೆಗೆ ಹೊರಟಿದ್ದ. ಎದುರಿಗೆ ಬಂದ ಸಾಗರ ‘ಯಾಕೆ ಮೈಮೇಲೆ ಬರುತ್ತೀಯ’ ಎಂದು ಜಗಳ ತೆಗೆದಿದ್ದ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಸಾಗರ ಬೈಕ್​ನಲ್ಲಿ ಇಟ್ಟಿದ್ದ ಚಾಕುವಿನಿಂದ ಶೋಯೇಬನಿಗೆ ಇರಿದು ಪರಾರಿಯಾಗಿದ್ದ.

ಗಾಯಾಳು ಶೋಯೇಬ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಮಾಧವ ನಗರದಲ್ಲಿ ವ್ಯಕ್ತಿ ಬಂಧನ

ಇಲ್ಲಿನ ಮಾಧವ ನಗರದಲ್ಲಿ ಮಂಗಳವಾರ ರಾತ್ರಿ ರಮೇಶ ಕಟ್ಟಿಮನಿ ಎಂಬಾತನಿಗೆ ಚಾಕುವಿನಿಂದ ಇರಿದಿದ್ದ ವಿನಾಯಕ ನರಗುಂದನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಕ್ಕಪಕ್ಕದ ಮನೆಯವರಾದ ರಮೇಶ- ವಿನಾಯಕ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮಂಗಳವಾರ ಜಗಳ ವಿಕೋಪಕ್ಕೆ ತಿರುಗಿದಾಗ ರಮೇಶನಿಗೆ ವಿನಾಯಕ ಚಾಕುವಿನಿಂದ ಇರಿದಿದ್ದ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಟ್ಕಾ ಆಡುತ್ತಿದ್ದವನ ಬಂಧನ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ನೇಕಾರ ಭವನದ ಬಳಿ ಮಂಗಳವಾರ ರಾತ್ರಿ ರಸ್ತೆಬದಿ ಮಟ್ಕಾ ಜೂಜಾಡುತ್ತಿದ್ದ ಆಟೋ ಚಾಲಕನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವಿನಗರದ ಹನುಮಂತ ಮಲ್ಲೇಶಪ್ಪ ಖಟಾವಕರ (48) ಬಂಧಿತ. ಆತನಿಂದ 11,450 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.