ಜಿಲ್ಲೆ

ಟೀಂ ರೋಲೆಕ್ಸ್ ಚಾಂಪಿಯನ್

ಸುನಿಲ್ ಪೊನ್ನೇಟಿ

ಮಡಿಕೇರಿ:

ಮೇಕೇರಿ ಎಂ.ಕೆ. ಕ್ರಿಕೆರ‍್ಸ್ ವತಿಯಿಂದ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಮೇಕೇರಿ ಪ್ರೀಮಿಯರ್ ಲೀಗ್ ಸೀಸನ್-5ರ ಚಾಂಪಿಯನ್ ಆಗಿ ಚರಣ್ ಮಾಲೀಕರತ್ವದ ಟೀಂ ರೋಲೆಕ್ಸ್ ಹೊರಹೊಮ್ಮಿದೆ. ಪ್ರದೀಪ್ ಮಾಲೀಕತ್ವದ ಸುತಿರ್ತ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ವಿನಯ್ ಮಾಲೀಕತ್ವದ ಸಂತೃಪ್ತಿ ಕಾಫಿ ಲಿಂಕ್ಸ್ ತಂಡ ತೃತೀಯ ಹಾಗೂ ಅನಿಸ್ ಮಾಲೀಕತ್ವದ ಅಪ್ಪು ಕ್ರಿಕೆರ‍್ಸ್ ತಂಡ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡಿದೆ.

ಪ್ರಥಮ ವಿಜೇತ ತಂಡಕ್ಕೆ ರೂ.1 ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.50 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ.10 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಯಿತು. ಅಲ್ಲದೇ ಹಲವು ವೈಯಕ್ತಿಕ ಬಹುಮಾನ ನೀಡಲಾಯಿತು.

ಮೂರನೇ ದಿನ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪಾಲ್ಗೊಂಡು ಬ್ಯಾಟಿಂಗ್ ಮಾಡುವ ಮೂಲಕ ಫೈನಲ್ ಪಂದ್ಯಾವಳಿ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಕ್ರೀಡೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಸಮುದಾಯಗಳ ನಡುವೆ ಒಗ್ಗಟ್ಟನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಕಾಫಿ ಬೆಳೆಗಾರ ಭೀಷ್ಮ ದಂಬೆಕೋಡಿ, ಕಿಂಬರ್ಲಿ ಕೂರ್ಗ್ ಕೆಫೆ ಕೂರ್ಗ್ ಗಾವಧನ ರೆಸಾರ್ಟ್ ಮಾಲೀಕ ಕೆ.ಎಂ.ಗಣೇಶ್, ಮೇಕೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಿ.ಬಿ. ಮಮತಾ, ಮೇಕೇರಿ ಗ್ರಾ.ಪಂ ಸದಸ್ಯ ಎಂ.ಯು.ಹನೀಫ್, ಮೇಕೇರಿ ದಲಿತ ಸಂಘರ್ಷ ಸಮಿತಿ ಸದಸ್ಯ ಹೆಚ್.ಸಿ.ಪೊನ್ನಪ್ಪ, ಕಾಫಿ ಬೆಳೆಗಾರರಾದ ಚೆಟ್ಟೋಳಿರ ಪ್ರಕಾಶ್, ಮಂದ್ರಿರ ನಾಗೇಶ್, ಗುತ್ತಿಗೆದಾರ ಜಿ.ಸಿ.ವಸಂತ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕೂರ್ಗ್ ಟೈಗರ್ ಟ್ರಾನ್ಸ್ಪೋರ್ಟ್ನ ಶುಭಾಷ್ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಮಮತಾ, ಭವಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.