ಜಿಲ್ಲೆ

ಕೆಸರು ತುಂಬಿದ ಜಾಗದಲ್ಲಿ ಶವ ಸಂಸ್ಕಾರ

ಪ್ರಸಿನ್ ಕೆ.ಆರ್

ಭೇರ್ಯ ಸಿ ಸಿ ಮಹದೇವ್ ಸಾಲಿಗ್ರಾಮ

ಸಾಲಿಗ್ರಾಮದಲ್ಲಿ ಎಲ್ಲ ಪಕ್ಷಗಳ ಚುನಾಯಿತರು ಗೆದ್ದು ಅಧಿಕಾರ ಮಾಡಿದರೂ ಶೋಷಿತ ಕುಟುಂಬಗಳಿಗೆ ಸ್ಮಶಾನ ಒದಗಿಸಿಕೊಡದೆ ಕೆಸರು ತುಂಬಿದ ಜಾಗದಲ್ಲಿ ಶವಸಂಸ್ಕಾರ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

ಸಾಲಿಗ್ರಾಮ ಪಟ್ಟಣದಲ್ಲಿ ವಾಸ ಮಾಡುತ್ತಿರುವ ಆದಿಜಾಂಬವ ಸಮುದಾಯ, ಜೋಗಿ ಸಮುದಾಯ ಮತ್ತು ಪೌರಕಾರ್ಮಿಕರ ಜನರು ಸತ್ತವರನ್ನು ಹೂಳಲು ಸೂಕ್ತ ಜಾಗ ಇಲ್ಲದೆ ಮೊದಲು ಹೂಳಿರುವವರ ಮೇಲೆ ಮತ್ತೊಬ್ಬರ ಶವವನ್ನ ಹೂಳುವಂತ ಪರಿಸ್ಥಿತಿ ಮುಂದುವರಿದಿದೆ. ಸ್ಮಶಾನ ಜಾಗಕ್ಕಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರದಂತೆ ವಿವಿಧ ಇಲಾಖೆಗಳಿಗೆ ಮನವಿ ಮಾಡಿದರೂ ಇದುವರಗೆ ಪ್ರಯೋಜನವಾಗಿಲ್ಲ. ಕೆಲವು ಅಧಿಕಾರಿಗಳು ತಮ್ಮ ದರ್ಪದ ಉತ್ತರದಿಂದ ವಾಪಸ್ ಕಳುಹಿಸುತ್ತಿದ್ದಾರೆ. ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಕ್ಕೆ ಜನಪ್ರತಿನಿಧಿಗಳು ಕೂಡ ಬೆಂಬಲ ಸೂಚಿಸುತ್ತಿಲ್ಲ.

ಹಳ್ಳದ ಪಕ್ಕದಲ್ಲಿ ಶವ ಸಂಸ್ಕಾರ: ಆದಿಜಾಂಬವ ಸಮುದಾಯ, ಜೋಗಿ ಸಮುದಾಯ ಮತ್ತು ಪೌರಕಾರ್ಮಿಕ ಕಾಲನಿಯ ನಿವಾಸಿಗಳು ಶತಮಾನದಿಂದಲೂ ಹಳ್ಳಿ ಮೈಸೂರಿಗೆ ಹೋಗುವ ಹಳ್ಳದ ಪಕ್ಕದಲ್ಲಿ ಶವಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಜಾಗವನ್ನು ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ 10 ಗುಂಟೆ ಯಷ್ಟು ಜಾಗಮಾತ್ರ ಉಳಿದುಕೊಂಡಿದೆ. ಈ ಜಾಗದಲ್ಲಿ ಮೂರು ಸಮುದಾಯದವರು ಶವಸಂಸ್ಕಾರ ಮಾಡಬೇಕಿದೆ.

ಸ್ಮಶಾನಕ್ಕೆ ಪ್ರತ್ಯೇಕ ಜಾಗ ನೀಡಿ: ಮೂರು ಸಮುದಾಯದವರು ಇದೇ ಜಾಗದಲ್ಲಿ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಿರುವುದರಿಂದ ಜಾಗ ಸಾಲುತ್ತಿಲ್ಲ. ಪ್ರತಿ ಸಮುದಾಯದವರಿಗೂ ಪ್ರತ್ಯೇಕ ಸ್ಮಶಾನ ಜಾಗ ನೀಡಿ ಎಂದು ಮನವಿ ಮಾಡಲಾಗಿದೆ. ಸರ್ಕಾರಿ ಕರಾಬು ಇದ್ದರೆ ಒಂದೊಂದು ಸಮುದಾಯಕ್ಕೆ ಸ್ಮಶಾನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮೂರು ಸಮುದಾಯದವರು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿಯೂ ಕೂಡ ಇದನ್ನು ಪರಿಗಣಿಸುತ್ತಿಲ್ಲ. ಜನಪ್ರತಿನಿಧಿಗಳು ಮುತುರ್ವರ್ಜಿ ವಹಿಸುತ್ತಿಲ್ಲ ಎಂಬ ಆರೋಪ ನಿವಾಸಿಗಳದ್ದು.

ಹಳ್ಳಿ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಇರುವ ಹಳ್ಳದ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತದೆ. ಗುಂಡಿ ತೆಗೆದರೆ ನೀರುಬರುತ್ತದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆ ಹರಿಸದಿದ್ದರೆ ರಸ್ತೆಯಲ್ಲೇ ಶವ ಇಟ್ಟು ಪ್ರತಿಭಟಿಸಬೇಕಾಗುತ್ತದೆ ಎಂದು ಬಾಬು ಜಗಜೀವನ್ ರಾಮ್ ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗುಂಡಿಯಲ್ಲಿ ಸಿಗುವ ಅಸ್ತಿ ಪಂಜರ: ಶವ ಹೂಳಲು ಗುಂಡಿ ತೆಗೆಯುವಾಗ ಹಿಂದೆ ಶವ ಸಂಸ್ಕಾರ ನಡೆಸಿದ ಅಸ್ತಿಪಂಜರಗಳು ಸಿಗುವುದು ಸಾಮಾನ್ಯವಾಗಿದೆ. ಆ ಗುಂಡಿಯನ್ನು ಮುಚ್ಚಿ ಮತ್ತೆ ಬೇರೆಡೆ ಗುಂಡಿ ತೆಗೆಯುವ ಸನ್ನಿವೇಶ ಏರ್ಪಟ್ಟಿದೆ. ಕೆಲವೊಮ್ಮೆ ಅಸ್ತಿ ಪಂಜರಗಳನ್ನು ಎಸೆದು ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡುವ ಅನಿವಾರ್ಯತೆ ಏರ್ಪಡುತ್ತದೆ. ಇನ್ನು ಸ್ಮಶಾನ ಜಾಗ ಕುಡುಕರ ಅಡ್ಡೆಯಾಗಿದ್ದು, ಇಲ್ಲೇ ಕುಡಿದು ಮಲಗುವವರು ಇದ್ದಾರೆ ರಾತ್ರಿ ಇಡೀ ಇಲ್ಲೇ ಕುಡಿದು ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಮಾಮೂಲಿಯಾಗಿದೆ.