ಜಿಲ್ಲೆ

ಸದಸ್ಯರಿಗಿಂತ ಏಜೆಂಟರ್ ಮಾತಿಗೆ ಮನ್ನಣೆ

ವಿವೇಕಾನಂದ ದಾಸನಕೊಪ್ಪ

ಶಿಗ್ಗಾಂವಿ: ಇಲ್ಲಿನ ಕೊಳಗೇರಿ ನಿವಾಸಿಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿಮಾಣವಾಗುತ್ತಿರುವ ಮನೆಗಳ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಪುರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟರ್​ಗಳ ಆಡಳಿತವೇ ಹೆಚ್ಚು ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸೋಮವಾರ ಕೇಳಿಬಂದವು.

ಸಭೆ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ಕೊಳಚೆ ಪ್ರದೇಶದಲ್ಲಿ ನಿಮಾಣವಾಗುವ ಮನೆಗಳ ಮಾಹಿತಿ ಪುರಸಭೆಗೆ ನೀಡಿಲ್ಲ. ಕಾನೂನುಬಾಹಿರವಾಗಿ ಕಾಮಗಾರಿ ನಡೆಯುತ್ತಿದೆ. ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದು, ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಕೈಗೊಂಡ ಕೊಳಗೇರಿ ಮಂಡಳಿ ಅಧಿಕಾರಿಗಳ ಕರೆದು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. 700ಕ್ಕೂ ಹೆಚ್ಚು ಮನೆ ನಿಮಾಣದಲ್ಲಿ ಗುತ್ತಿಗೆದಾರರು ಗುಣಮಟ್ಟದ ಸಾಮಗ್ರಿ ಬಳಸುತ್ತಿಲ್ಲ. ಇದನ್ನು ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಅವ್ಯವಹಾರ ಆರೋಪಕ್ಕೆ ಸ್ಪಂದಿಸಿದ ಅಧ್ಯಕ್ಷ ಸಿದ್ದಾರ್ಥಗೌಡ್ರ ಪಾಟೀಲ, ವಿಶೇಷ ಸಭೆಯೊಂದನ್ನು ಆಯೋಜಿಸಿ, ಅಧಿಕಾರಿಗಳನ್ನು ಆಹ್ವಾನಿಸಿ ಪಟ್ಟಣದ ಬಡವರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಂತರ ಮಾತನಾಡಿದ ಗೌಸ್​ಖಾನ್ ಮುನಸಿ, ಪುರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟರ್​ಗಳು ಮಾತೇ ಹೆಚ್ಚು ನಡೆಯುತ್ತಿದೆ ಎಂದು ಆಡಳಿತ ವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ಶೀಘ್ರದಲ್ಲಿಯೇ ಆಡಳಿತ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು.

ಪಟ್ಟಣದಲ್ಲಿ ನಿರ್ವಿುಸಿರುವ ರಾಣಿ ರಚನ್ನಮ್ಮ, ಡಾ. ಅಂಬೇಡ್ಕರ್ ಮೂರ್ತಿಗಳಿಗೆ ಬಣ್ಣ ಹಚ್ಚಲು ಮತ್ತು ವೃತ್ತಗಳ ನವೀಕರಣದ ವ್ಯವಸ್ಥೆ, ಈಜು ಕೊಳ ನಿಮಾಣ, ಕಸಾಪ ಭವನ ಸ್ಥಾಪನೆಗೆ ಸೂಕ್ತ ಸ್ಥಳ ಜಾಗ ನಿಗದಿ ಮಾಡಬೇಕೆಂಬ ಸದಸ್ಯರ ಒಕ್ಕೊರಲ ಅಭಿಪ್ರಾಯದ ಮೇರೆಗೆ ಒಮ್ಮತ ವ್ಯಕ್ತಪಡಿಸಲಾಯಿತು. ವಿವಿಧ ಸಮಾಜಗಳಿಗೆ, ಸಂಘ-ಸಂಸ್ಥೆಗಳಿಗೆ ಜಾಗ ನೀಡಲು ಮನವಿ ಪ್ರಸ್ತಾಪ ಮಂಡಿಸಿದವರಿಂದ ದಾಖಲೆಗಳನ್ನು ಸ್ವೀಕರಿಸಲು ಮುಕ್ಯಾಧಿಕಾರಿಗಳಿಗೆ ಸೂಚಿಸಿದರು.

ಒಂದೇ ಕಟ್ಟಡದಲ್ಲಿ ಬ್ಯಾಂಕ್​ಗಳ ಹಬ್ ಮಾಡುವ ವಿಚಾರವನ್ನು ಮುಖ್ಯಾಧಿಕಾರಿ ಮಲ್ಲೇಶ ಎನ್. ಸಭೆಗೆ ಮಂಡಿಸಿದರು. ಇದಕ್ಕೆ ಸ್ಥಳ ನಿಗದಿಪಡಿಸುವ ಕುರಿತಂತೆ ಸುಭಾಸ ಚವ್ಹಾಣ, ದಯಾನಂದ ಅಕ್ಕಿ ನಡುವೆ ಮಾತಿನ ಚಕಮಕಿ ನಡೆದು, ಇದು ಚರ್ಚೆಯೋ, ಹಾಸ್ಯವೋ ಎಂಬಂತೆ ಭಾಸವಾಯಿತು. ಮುಖ್ಯಾಧಿಕಾರಿಗೆ ಸ್ಥಳ ಗುರುತಿಸಿ, ಮುಂದಿನ ಸಭೆಯಲ್ಲಿ ನಿರ್ಣಯಿಸುವ ಭರವಸೆಯೊಂದಿಗೆ ಚರ್ಚೆಗೆ ತೆರೆ ಎಳೆದರು.

ಊರಲಿದ್ದ ಸರ್ಕಾರಿ ಕಚೇರಿಗಳನ್ನು ಊರು ಹೊರಗೆ ಹಾಕಿ, ವ್ಯಾಪಾರ-ವಹಿವಾಟುಗಳಿಗೆ ಕೊಕ್ಕೆ ಹಾಕಿದ್ದೀರಿ ಎಂದು ಗೌಸ್​ಖಾನ್ ಮುನಸಿ ಬಿಜೆಪಿ ಸದಸ್ಯರತ್ತ ಕೈತೋರಿ ಅಸಮಾಧಾನ ವ್ಯಕ್ತಪಡಿಸಿದರು. ಆಗ ಬುಳ್ಳಕ್ಕನವರ, ಸಿಂಧೂರು ಅವರಿದ್ದಾಗ ಆಗಿದೆ ಹೊರತು, ಬೊಮ್ಮಾಯಿ ಅವರ ಕಾಲದಲ್ಲಲ್ಲ ಎಂದು ಸ್ಪಷ್ಟಪಡಿಸಿದರು.

ನಾಮನಿರ್ದೇಶಿತ ಮಂಜುನಾಥ ಮಣ್ಣಣ್ಣವರ ಕೆಲ ವಿಚಾರ, ಸಲಹೆ ಮಂಡಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸುಭಾಸ ಚವ್ಹಾಣ, ಸಭೆಗೆ ಸಲಹೆ ಕೊಡಬಹುದು ಹೊರತು, ಪರ, ವಿರೋಧ ವ್ಯಕ್ತಪಡಿಸುವ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು. ಇದರಿಂದ ಆಕ್ರೋಶಗೊಂಡ ಮಣ್ಣಣ್ಣವರ, ಹಾಗಾದರೆ ಸಭೆಯಿಂದ ನಾವು ಹೊರ ಹೋಗುತ್ತೇವೆ ಎಂದು ಹೊರಟರು. ಆಗ ಸುಭಾಸ ಚವ್ಹಾಣ, ಹೊರ ಹೋಗಲು ಹೇಳುತ್ತಿಲ್ಲ. ಕಾನೂನು ತಿಳಿಸುತ್ತಿದ್ದೇವೆ ಎಂದು ಹೇಳಿದಾಗ, ನನಗೂ ಗೊತ್ತಿದೆ ಸಲಹೆ ಸ್ವೀಕರಿಸಿ ಎಂದಷ್ಟೇ ಹೇಳಿ ಚರ್ಚೆಯಲ್ಲಿ ಪಾಲ್ಗೊಂಡರು.

ಉಪಾಧ್ಯಕ್ಷೆ ಶಾಂತಾಬಾಯಿ ಸುಬೇದಾರ, ಸದಸ್ಯರಾದ ಪರಶುರಾಮ ಸೊನ್ನದ, ಸುಲೇಮಾನ್ ತರ್ಲಘಟ್ಟ, ಜಾಫರ್ ಪಠಾಣ, ರಮೇಶ ವನಹಳ್ಳಿ, ಮಂಜುನಾಥ ಬ್ಯಾಹಟ್ಟಿ, ಚಂದ್ರು ಕೊಡ್ಲಿವಾಡ, ವಸಂತಾ ಬಾಗೂರು, ಅನುರಾಧಾಮಾಳವದೆ ಇತರ ಸದಸ್ಯರಿದ್ದರು.