ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಶಕ್ತಿ ಸಂಭ್ರಮ-2024 ರ ಅಂಗವಾಗಿ ಆಯೋಜಿಸಿದ್ದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವಜನೋತ್ಸವದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ನೆರವೇರಿಸಿದರು. ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ, ಪ್ರೊ.ಶಾಂತಾದೇವಿ ಟಿ, ಸಂಗಮೇಶ ಬಬಲೇಶ್ವರ ಮತ್ತಿತರರಿದ್ದಾರೆ.  
ಜಿಲ್ಲೆ

ಸ್ತ್ರೀ ಮೀಸಲಾತಿ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲಬೇಕು; ಸಚಿವೆ ಲಕ್ಷ್ಮಿ ಹೆಬ್ಬಾಳಕರ

ವಿಜಯಪುರ: ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಮೂಲಕ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯವಾಗಿ ಮುಖ್ಯವಾಹಿನಿಗೆ ತಂದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೆಮ್ಮೆ ವ್ಯಕ್ತಪಡಿಸಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಶಕ್ತಿ ಸಂಭ್ರಮ-2024 ರ ಅಂಗವಾಗಿ ಬುಧವಾರ ಆಯೋಜಿಸಿದ್ದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವಜನೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಹಿಳೆ ಇಲ್ಲದ ಮನೆ ಮತ್ತು ರಾಷ್ಟ್ರಕರಣ ಊಹಿಸಲು ಸಾಧ್ಯವಿಲ್ಲ. ಇಂದು ಮಹಿಳೆ ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ. ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕಿರುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಶ್ರಮಿಸಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ಸದನಗಳಲ್ಲಿ ಮಸೂದೆ ಪಾಸ್ ಆಗುವಂತೆ ನೋಡಿಕೊಂಡಿದ್ದು ಶ್ಲಾಘನೀಯ ಎಂದರು.

ಮಹಿಳೆ ಇಲ್ಲದ ಮನೆ ಮತ್ತು ರಾಷ್ಟ್ರ ರಾಜಕಾರಣ ಊಹಿಸಲು ಸಾಧ್ಯವಿಲ್ಲ. ಮಹಿಳೆ ಎಂದಾಕ್ಷಣ ತೊಟ್ಟಿಲು ತೂಗಲು, ಅಡುಗೆ ಮನೆಗೆ ಸೀಮಿತ ಎಂಬ ಕಾಲವೊಂದಿತ್ತು. ಈಗ ಆ ಕಾಲ ಬದಲಾಗಿದೆ. ಮೂರು ಕುಲಾಯಿ ಒಂದು ಕಡೆ ಕೂಡಲ್ಲ ಎಂಬ ಮಾತು ಈಗ ಪ್ರಸ್ತುತತೆ ಕಳೆದುಕೊಂಡಿದೆ. ಹೆಣ್ಣು ಮಗು ಹುಟ್ಟಿದರೆ ಸಂಭ್ರಮಿಸಲಾಗುತ್ತಿದೆ ಎಂದರು.

ಪ್ರೇರಣಾದಾಯಕ ನುಡಿ

ಖಾನಾಪುರ ವಿಧಾನ ಸಭೆ ಕ್ಷೇತ್ರದ ಚಿಕ್ಕಹಟ್ಟಿಹೊಳಿಯಲ್ಲಿ ಜನಿಸಿ ಕೆಂಪು ಬಸ್ಸಿನಲ್ಲಿ ಓಡಾಡಿ ಶಿಕ್ಷಣ ಪೂರೈಸಿದ ರೈತನ ಮಗಳಾಗಿ ಕಷ್ಟದಲ್ಲಿ ಬೆಳೆದು ಏಳೂವರೆ ಕೋಟಿ ಜನಸಂಖ್ಯೆ ಹೊಂದಿದ ಕರ್ನಾಟಕದಲ್ಲಿ ಮಂತ್ರಿಯಾಗಿದ್ದು ನನ್ನ ಮಟ್ಟಿಗೆ ಸಾಧನೆಯಂತೂ ಹೌದು. ಕೆಂಪು ಬಸ್ಸಿನಲ್ಲಿ ಶಾಲೆ-ಕಾಲೇಜಿಗೆ ಹೋಗುತ್ತಿದ್ದ ನಾನು ಇಂದು ಸಚಿವೆಯಾಗಿ ಬೆಳೆಯಲು ಕಾರಣವೇ ನನ್ನಲ್ಲಿರುವ ಛಲ. ಇಂದಿಗೂ ಆ ಛಲ ಗಟ್ಟಿಯಾಗಿದೆ. ಆ ಗಟ್ಟಿತನ ಎಲ್ಲರಲ್ಲೂ ಬರಬೇಕೆಂದು ಸಚಿವೆ ಹೆಬ್ಬಾಳಕರ ವಿದ್ಯಾರ್ಥಿನಿಯರಿಗೆ ಹೇಳಿದರು.

ಹೋರಾಟವೇ ಜೀವನ. ಹೋರಾಡಿ. ಈ ಬದುಕೇ ಹೋರಾಟವಾಗಿಸಿಕೊಳ್ಳಿ ಎಂದ ಹೆಬ್ಬಾಳಕರ, ಅರುಣಿಮಾ ಸಿನ್ಹಾ ಮೌಂಟ್ ಎವರೆಸ್ಟ್ ಏರಿದೆ ಮೊದಲ ಅಂಗವಿಕಲ ಮಹಿಳೆ. ರೈಲಿನಲ್ಲಿ ಹೋಗಬೇಕಾದ ದರೋಡೆಕೋರರು ರೈಲಿನಿಂದ ತಳ್ಳಿದ ಪರಿಣಾಮ ಅರುಣಿಮಾ ಕಾಲು ಕಳೆದುಕೊಳ್ಳಬೇಕಾಗುತ್ತದೆ. ಚಿಕಿತ್ಸೆ ಸಂದರ್ಭದಲ್ಲಿಯೇ ಆಕೆ ಮೌಂಟ್ ಎವರೆಸ್ಟ್ ಏರಿ ಭಾರತದ ಧ್ವಜ ಹಾರಿಸಿ ಸಾಧನೆ ಮೆರೆದರು. ಸುಪ್ರಿಯಾ ರಾಯ್ 13 ನೇ ವರ್ಷಕ್ಕೆ ಮದುವೆಯಾಗುತ್ತಾರೆ. ಆಕೆ 10 ನೇ ತರಗತಿ ಪರೀಕ್ಷೆ ಬರೆದಾಗ ತೊಡೆಯ ಮೇಲೆ ಕೂಸಿತ್ತು. ಇವತ್ತು 80 ಕೋಟಿ ರೂಪಾಯಿ ಲಾಭದ ಬೇಕರಿ ನಡೆಸುತ್ತಾರೆ. ಅಂಥ ಸಾಧನೆಗೆ ಮಹಿಳಾ ವಿವಿಯ ವಿದ್ಯಾರ್ಥಿನಿಯರು ಮುಂದಾಗಬೇಕು ಎಂದರು.

ನನ್ನ ವಿಚಾರಧಾರೆ ಕೇಳಿ ನನ್ನನ್ನು ಬಹಳಷ್ಟು ಜನ ಫೆಮಿನಿಸ್ಟ್ ಎಂದು ಕರೆಯುತ್ತಾರೆ. ಅದಕ್ಕೆ ನನಗೆ ಖುಷಿಯೂ ಇದೆ. ಮಹಿಳೆ ಸಾಧನೆ ಮಾಡದೇ ಇರುವ ಕ್ಷೇತ್ರ ಉಳಿದೇ ಇಲ್ಲ. ಹೀಗಾಗಿ ಮಹಿಳೆಯರಿಗೆ ಅವಕಾಶಗಳನ್ನು ನೀಡುವ ಅವಶ್ಯಕತೆ ಇದೆ. ಭಾರತ ವಿಶಾಲವಾಗಿ ಬೆಳೆಯುತ್ತಿದೆ. ಸ್ಪರ್ಧಾ ಮನೋಭಾವ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ತರಬೇತುಗೊಳ್ಳಬೇಕೆಂದರು.

ಉಪ್ಪಿಗೆ ನೀರಿನಿಂದಲೇ ಜನ್ಮವಾದರೆ ದುರಾದೃಷ್ಟವಶಾತ್ ನೀರಿನಿಂದಲೇ ಉಪ್ಪಿಗೆ ಮರಣವಿದೆ. ಹೀಗಾಗಿ ಮಹಿಳೆಯರು ಜಾತಿ, ಮತ, ಕುಲ ಎಂದು ಬೇಧ-ಭಾವ ಮಾಡದೇ ನಾವೆಲ್ಲ ಒಂದೇ ಕುಲ ಎಂದು ಒಂದಾಗಿ ಇರಬೇಕು. ಅಂದಾಗ ಜೀವನ ಪಾವನ ಆಗಲು ಸಾಧ್ಯ. ಮನುಷ್ಯರಾಗಿ ಹುಟ್ಟಲು ಬಹಳ ಪುಣ್ಯ ಮಾಡಿದ್ದೇವೆ. ಭಗವಂತ ವಿಚಾರ ಮಾಡುವ ಶಕ್ತಿ ನಮಗೆ ಕೊಟ್ಟಿದ್ದಾನೆ. ಬಸವಣ್ಣ, ಅಕ್ಕಮಹಾದೇವಿ ನಾಡಿನಲ್ಲಿ ನಾವು ಹುಟ್ಟಿದ್ದೇವೆ. ಸುಂದರ ದೇಶದಲ್ಲಿ ಜನಿಸಿದ್ದೇವೆ. ಕಷ್ಟ ಎಲ್ಲರಿಗೂ ಇದ್ದೇ ಇದೆ. ಗುರಿ ಇಟ್ಟುಕೊಂಡು ಸತತ ಪ್ರಯತ್ನದೊಂದಿಗೆ ಸಾಧನೆಯೆಡೆಗೆ ನಾವು ಸಾಗಬೇಕಿದೆ. ಗುರಿ ಇಲ್ಲದ ಜೀವನ ಬೋರ್ಗಲ್ಲಿನ ಮೇಲೆ ನೀರು ಸುರಿದಂತೆ ಎಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಹಿಳಾ ವಿವಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 100 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿಸಿಕೊಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಲ್ಲಿ ಮನವಿ ಮಾಡಿದರು.

ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಅಧ್ಯಕ್ಷತೆ ವಹಿಸಿದ್ದರು. ತೊರವಿ ಗ್ರಾಪಂ ಅಧ್ಯಕ್ಷೆ ಪದ್ಮಾಬಾಯಿ ನಡಗಡ್ಡಿ, ಕುಲಸಚಿವ ಶಂಕರಗೌಡ ಎಸ್.ಸೋಮನಾಳ, ಮೌಲ್ಯಮಾಪನ ಕುಲಸಚಿವ ಎಚ್.ಎಂ. ಚಂದ್ರಶೇಖರ ಮತ್ತಿತರರಿದ್ದರು.

ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ. ಸ್ವಾಗತಿಸಿದರು. ವಿಷ್ಣು ಶಿಂಧೆ ನಿರ್ವಹಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದ ಕಲಾ ತಂಡಗಳು ಹಾಗೂ ಯುವತಿಯರು ಅದ್ದೂರಿಯಾಗಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುನ್ನ ನಡೆದ ಕಲಾ ಪ್ರದರ್ಶನ ಜನಮನ ಸೂರೆಗೊಂಡಿತು.