ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಅನ್ನು ಉದ್ಯಮವೆಂದು ಅಧಿಕೃತವಾಗಿ ಗುರುತಿಸಲ್ಲವಾದರೂ, ಇಂದು ಹಿಂದೆಂದಿಗಿಂತಲೂ ಹೆಚ್ಚು ಸಂಘಟಿತ, ಪಾರದರ್ಶಕ, ವೃತ್ತಿಪರ ಹಾಗೂ ಜವಾಬ್ದಾರಿಯತವಾಗಿ ಈ ಉದ್ಯಮ ಬೆಳೆದಿದೆ, ಗಮನಾರ್ಹ ಬದಲಾವಣೆಗಳು ಆಗಿವೆ ಎಂದು ಕ್ರೆಡೈ ಕರ್ನಾಟಕ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಾವಿಗ 8 ಬಿಲ್ಡಿಂಗ್ ಮಟಿರಿಯಲ್ ಎಕ್ಸಪೋ ಉದ್ಘಾಟಿಸಿ ಅವರು ಬಿಲ್ಡರ್ ಮತ್ತು ಡೆವಲಪರ್ ಗಳನ್ನು ಉದ್ದೇಶಿಸಿ ಮಾತನಾಡಿದರು.
2014ರಲ್ಲಿ $200 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿತ್ತು. ಭಾರತೀಯ ರಿಯಲ್ ಎಸ್ಟೇಟ್ ವಲಯವು ಇಂದು 650 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ವಹಿವಾಟು ನಡೆಸುವ ಉದ್ಯಮವಾಗಿದೆ ಮತ್ತು 2030ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಇದರಿಂದ ದೇಶದ ಆರ್ಥಿಕ ಬೆಳವಣಿಗೆ ಮಾತ್ರವಲ್ಲ ಈ ವಲಯದ ಮೇಲಿನ ನಂಬಿಕೆಯನ್ನೂ ಹೆಚ್ಚಿಸಲಿದೆ ಎಂದರು.
ಮನೆ, ನಿವೇಶನ ಕೊಳ್ಳುವವರು ಇಂದು ಹೆಚ್ಚು ಮಾಹಿತಿಯುಕ್ತ ಮತ್ತು ವಿವೇಚನಾಶೀಲರಾಗಿದ್ದಾರೆ. ವಿಶೇಷವಾಗಿ ಕೋವಿಡ್ ನಂತರದಲ್ಲಿ ಗ್ರಾಹಕರ ಆಕಾಂಕ್ಷೆ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ. ವಿನ್ಯಾಸ, ಸೌಕರ್ಯ ಅಥವಾ ಯೋಗಕ್ಷೇಮ ಯಾವುದೇ ವಿಷಯದಲ್ಲಿ ಗ್ರಾಹಕರು ಸ್ಪಷ್ಟವಾಗಿದ್ದಾರೆ ಎಂದರು.
"ಒಟ್ಟಿಗೆ ಹೋಗುವುದು ಒಂದು ಆರಂಭ, ಒಟ್ಟಿಗೆ ಇರುವುದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು' ಎಂಬ ಮಾತಿನಂತೆ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಹಯೋಗವು ಸಾಧನೆಯ ಅಡಿಪಾಯ ಎಂದು ಅವರು ಪ್ರತಿಪಾದಿಸಿದರು.
ಕ್ರೆಡೈ ಹುಬ್ಬಳ್ಳಿ ಧಾರವಾಡ ಅಧ್ಯಕ್ಷ ಗುರುರಾಜ ಅಣ್ಣಿಗೇರಿ, ಕಾರ್ಯದರ್ಶಿ ಸತೀಶ ಮುನವಳ್ಳಿ, ಅಧ್ಯಕ್ಷ (ಎಲೆಕ್ಟ್) ಅಮೃತ್ ಮೆಹರವಾಡೆ, ಖಜಾಂಚಿ ಬ್ರಿಯಾನ್ ಡಿಸೋಜ ಮತ್ತು ಕ್ರೆಡೈ ಕರ್ನಾಟಕ ನಿಕಟಪೂರ್ವ ಅಧ್ಯಕ್ಷ ಪ್ರದೀಪ ರಾಯ್ಕರ್ ಭಾಗವಹಿಸಿದ್ದರು.