ಜಿಲ್ಲೆ

‘ಕ್ರಿಯೇಟಿವ್ ಆರ್ಟ್ ಗ್ಯಾಲರಿ’ ಸಾರ್ವಜನಿಕರಿಗಿನ್ನು ಮುಕ್ತ

ಹರ್ಷ ನ.ಪುರೋಹಿತ

ಚಿತ್ರದುರ್ಗ: ಆರ್ಟ್ ಗ್ಯಾಲರಿಯಾಗಿ ಪರಿವರ್ತನೆಯಾದ ಮನೆ… ಗೋಡೆಗಳನ್ನು ಅಲಂಕರಿಸಿದ್ದ ವಿವಿಧ ಕಲಾಕೃತಿಗಳು… ಅವುಗಳನ್ನು ತಮ್ಮ ಆಲೋಚನೆಗೆ ತಕ್ಕಂತೆ ಅರ್ಥೈಸುತ್ತಿದ್ದ ಕಲಾಪ್ರೇಮಿಗಳು… ಕೆಲವೊಂದು ಚಿತ್ರದ ವಿವರಣೆ ಬಯಸುತ್ತಿದ್ದ ವಿದ್ಯಾರ್ಥಿಗಳು… ನಿಮ್ಮ ಕಲ್ಪನೆಯಲ್ಲಿಯೇ ಅವುಗಳಿಗೆ ಜೀವ ಕೊಡಿ, ಎಲ್ಲರಿಗೂ ಅವು ಒಂದೇ ತರಹ ಕಾಣುವುದಿಲ್ಲ ಎಂದು ಪ್ರೋತ್ಸಾಹ ನೀಡುತ್ತಿದ್ದ ಕಲಾವಿದ ವೀರೇಶ್…

ನಗರದ ಜೋಗಿಮಟ್ಟಿ ರಸ್ತೆಯ ಮನೆ ‘ಶ್ರಮ’ದಲ್ಲಿ ಮಂಗಳವಾರ ಉದ್ಘಾಟನೆಯಾದ ‘ಕ್ರಿಯೇಟಿವ್ ಆರ್ಟ್ ಗ್ಯಾಲರಿ’ಯ ಒಟ್ಟು ಚಿತ್ರಣವಿದು.

ಕೃತಕ ಬುದ್ಧಿಮತ್ತೆ ಎಷ್ಟರಮಟ್ಟಿಗೆ ಅಪಾಯಕಾರಿಯಾಗಬಲ್ಲದು ಎಂಬುದನ್ನು ಸೂಕ್ಷ ್ಮವಾಗಿ ಕಟ್ಟಿಕೊಟ್ಟ ‘ಆರ್ಟ್ ಅಗೇನ್ಸ್ಟ್ ಎಐ’ ಆರ್ಟ್ ಗ್ಯಾಲರಿಯ ಹೈಲೈಟ್. ಮಾನವನ ಸೃಜನಶೀಲತೆಯನ್ನು ಹೊಸಕಿ ಹಾಕುವ ಕೃತಕ ಬುದ್ಧಿಮತ್ತೆಯ ಬಗೆಗೆ ಸಾತ್ವಿಕ ಆಕ್ರೋಶ ಅಲ್ಲಿ ಮೇಳೈಸಿತ್ತು.

ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಅವರು ಪ್ರತಿ ಕಲಾಕೃತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಸಾಗಿದರು. ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಹಾಗೂ ಕಲಾವಿದ ವೀರೇಶ್ ಆ ಚಿತ್ರಗಳಿಗೆ ವಿವರಣೆ ನೀಡಿದರು.

ಚಿತ್ರಗಳಲ್ಲಿ ಅರಳಿ ಬಂದ ಯಶೋಧರ ಚರಿತೆ, ಅಲ್ಲಮರ ವಚನಗಳು ಓದು, ಓದಿನ ಅರ್ಥೈಕೆಯ ಮಹತ್ವವನ್ನು ಸಾರುವಂತಿದ್ದವು. ಹಂಪಿಯ ಭಗ್ನ ಅವಶೇಷಗಳ ಚಿತ್ರಗಳು ಕಣ್ಣಲ್ಲಿ ನೀರು ತರಿಸಿದವು. ಐತಿಹಾಸಿಕ ಕಲ್ಲಿನಕೋಟೆ, ಬೇಲೂರು-ಹಳೇಬೀಡು ಕಲಾಕೃತಿಗಳ ಮಾದರಿ, ಗ್ರಾಮೀಣ ಸೊಗಡು, ಸ್ತ್ರೀ-ಜಗತ್ತು, ರಾಷ್ಟ್ರಕವಿ ಕುವೆಂಪು ಒಳಗೊಂಡು ಅನೇಕ ಖ್ಯಾತ ಸಾಹಿತಿಗಳ ಚಿತ್ರಗಳು ಗಮನ ಸೆಳೆದವು.

ಆಳವಾದ ಅಧ್ಯಯನದ ಫಲ
ಕಲಾವಿದನೊಳಗೆ ಆಳವಾದ ಅಧ್ಯಯನ ಇದ್ದಾಗ ಮಾತ್ರ ಈ ರೀತಿಯ ಚಿತ್ರಗಳು ಹೊರಹೊಮ್ಮಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಅಭಿಪ್ರಾಯಪಟ್ಟರು.

ಆರ್ಟ್ ಗ್ಯಾಲರಿ ಉದ್ಘಾಟಿಸಿ ಮಾತನಾಡಿ, ಕಲೆ ಎಂಬುದು ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದರೊಳಗೆ ಹಾಸುಹೊಕ್ಕಾದಾಗ ಮಾತ್ರ ಕಲಾವಿದನಾಗಿ ಹೊರಹೊಮ್ಮಲು ಸಾಧ್ಯ. ಆದರೆ, ಪ್ರಸ್ತುತ ದಿನಗಳಲ್ಲಿ ಇನ್‌ಸ್ಟಂಟ್ ಕಾಫಿ ಮಾದರಿಯಲ್ಲಿ ಸಿದ್ಧವಾದ ವಸ್ತುಗಳಿಗೆ ಮಾರು ಹೋಗುತ್ತಿರುವ ಕಾರಣ ಸ್ವಂತಿಕೆ ಎಂಬುದು ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇವು ಮಾಮೂಲಿ ಚಿತ್ರಗಳಂತಿಲ್ಲ. ನೋಡುಗರ ಭಾವಕ್ಕೆ ಭಿನ್ನ-ವಿಭಿನ್ನ ಅಭಿಪ್ರಾಯ ಮೂಡಿಸುವಂತಿದ್ದು, ಜೀವಂತಿಕೆ ಪಡೆದಿದೆ. ವಿವಿಧ ರೀತಿಯ ಆಲೋಚನೆ ಇದ್ದಾಗ ವಿನೂತನ ಪ್ರಯೋಗಗಳಲ್ಲಿ ಸಫಲತೆ ಕಾಣಬಹುದು ಎಂಬುದಕ್ಕೂ ಉತ್ತಮ ನಿದರ್ಶನವಾಗಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲರಿಗೂ ಮನೆಯೊಳಗೆ ಬೆಂಬಲ ಸಿಗುವುದಿಲ್ಲ. ಇದಕ್ಕೆ ವಿಶ್ವದ ಶ್ರೇಷ್ಠ ತತ್ವಜ್ಞಾನಿ ಸಾಕ್ರಟೀಸ್ ಕೂಡ ಹೊರತಾಗಿರಲಿಲ್ಲ. ಆದರೆ, ವೀರೇಶ್ ಪುಣ್ಯವಂತರಾಗಿದ್ದು, ಕುಟುಂಬದ ಸಹಕಾರದಿಂದ ಉತ್ತಮ ಗ್ಯಾಲರಿಯನ್ನೇ ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಮಾತನಾಡಿ, ಅಲ್ಲಮನ ಪ್ರೇರಣೆ ಉಂಟಾದ ಕಾರಣ ವೀರೇಶ್ ವಚನಗಳ ಆಳ ಮತ್ತು ಎತ್ತರಕ್ಕೆ ತಲುಪಿ ಅದ್ಭುತವಾಗಿ ಕಲಾಕೃತಿಗಳನ್ನು ರಚಿಸಿದ್ದಾರೆ. ಗ್ಯಾಲರಿಯಲ್ಲಿ ಅವುಗಳ ಮಹತ್ವ ಎದ್ದು ಕಾಣುತ್ತಿದೆ ಎಂದರು.

ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಸಣ್ಣ ಪ್ರಯತ್ನ ಮುಂದೆ ದೊಡ್ಡ ಯೋಜನೆ ಆಗಲಿದೆ. ಅದಕ್ಕಾಗಿ ನಿರಂತರ ಶ್ರಮವಿರಬೇಕು. ಚಿತ್ರಕಲೆ ಪದವಿ ಪಡೆದು ಯಾರ ಬಳಿಯೋ ಕೆಲಸ ಮಾಡಿದರೆ ಪ್ರಯೋಜನವಿಲ್ಲ. ಕಲಾವಿದನಾಗುವ ತುಡಿತವಿರಬೇಕು. ಕೌಶಲ ಇದ್ದಲ್ಲಿ ಮಾತ್ರ ಇದು ಸಾಧ್ಯ. ಕಲಾಕೃತಿಗಳ ಕುರಿತು ಕಲಾವಿದನೇ ವಿಮರ್ಶೆಗೆ ಒಳಗಾದಾಗ ಚಿತ್ರಗಳು ಉತ್ತಮ ಸ್ವರೂಪ ಪಡೆಯಲಿದೆ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಚಾರ್ಯ ಸಂಗೇನಹಳ್ಳಿ ಅಶೋಕಕುಮಾರ್, ರಂಗ ಕಲಾವಿದ ಕೆ.ಪಿ.ಎಂ. ಗಣೇಶಯ್ಯ, ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೊರ ರಾಜ್ಯ, ವಿದೇಶಗಳಲ್ಲಿ ಗ್ಯಾಲರಿ ಪ್ರದರ್ಶನ ಆಯೋಜಿಸಬಹುದು. ಆದರೆ, ಕೋಟೆನಗರಿಯ ಜನ ವೀಕ್ಷಿಸಲಿಕ್ಕಾಗಿ ಗ್ಯಾಲರಿ ನಿರ್ಮಿಸಿದ್ದೇನೆ. ಹೆಸರಲ್ಲೇ ಚಿತ್ರವಿರುವ ಚಿತ್ರದುರ್ಗದ ಸುಂದರ ಸ್ಥಳದಲ್ಲಿ ಗ್ಯಾಲರಿ ನಿರ್ಮಾಣವಾದರೆ, ಅನೇಕ ಚಿತ್ರಕಲಾವಿದರಿಗೆ ಸಹಕಾರಿಯಾಗಲಿದೆ. ಈ ಕುರಿತು ಜಿಲ್ಲಾಡಳಿತ ಗಮನಹರಿಸಬೇಕು.ಕ್ರಿಯೇಟಿವ್ ವೀರೇಶ್, ಕಲಾವಿದ