ಒಂದೊಂದು ಬಾರಿ ಒಳ್ಳೆಯವರು ರಾಜ್ಯವನ್ನು ಅಳುತ್ತಾರೆ, ಒಂದೊಂದು ಬಾರಿ ರಾಕ್ಷಸರು ಸಹ ರಾಜ್ಯವನ್ನು ಅಳುತ್ತಾರೆ. ರಾಜ್ಯದಲ್ಲಿ ಪ್ರಸ್ತುತ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ರಾಕ್ಷಸರ ಆಡಳಿತ ನಡೆಯುತ್ತಿದೆ ಎಂಬುದಕ್ಕೆ ಶಿವಮೊಗ್ಗ ಹಾಗೂ ಕೋಲಾರದ ಪ್ರಕರಣಗಳು ಸಾಕ್ಷಿಯಾಗಿವೆ. ಕಲ್ಲು ಹೊಡೆಯುವ ಸಂಸ್ಕೃತಿ ಹಿಂದು ಧರ್ಮದಲ್ಲಿ ಇಲ್ಲ. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಒಟ್ಟಾಗಿ ಹೊರಗೆ ಬಂದು ಚಾಕು ಚೂರಿ ಹಿಡಿದು ಹಿಂಬಂದಿಯಿಂದ ಚುಚ್ಚುವುದು ಹಿಂದು ಸಂಸ್ಕೃತಿ ಅಲ್ಲ. ಆಡಳಿತ ಚುಕ್ಕಾಣಿ ಹಿಡಿದವರ ಮನಸ್ಥಿತಿಯಂತೆ ಉಳಿದವರು ಇರುತ್ತಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಣ್ಣುಮುಚ್ಚಿಕೊಂಡು ಕೂತಿದ್ದಾರೆ ಎಂದರೆ ಗೃಹ ಸಚಿವರು ಏನು ಮಾಡಲು ಸಾಧ್ಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಪಿಎಫ್‌ಐ, ಕೆಎಫ್‌ಡಿ ಕಾರ್ಯಕರ್ತರ ಮೇಲೆ ಇದ್ದ ಪ್ರಕರಣಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಇಂದು ರಾಜ್ಯದಲ್ಲಿ ವಿಕೃತಿಗಳು ವಿಜೃಂಭಿಸುತ್ತಿವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಕಾರಣ, ಅವರು ಬಿಗಿ ಆಗಿ ಇದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳು ಎದ್ದು ನಿಂತಿದ್ದು, ಸರ್ಕಾರಕ್ಕೆ ಲಂಗು ಲಾಗಾಮು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಮಾತನಾಡುವ ಧೈರ್ಯವನ್ನು ಸರ್ಕಾರ ತೋರುತ್ತಿಲ್ಲ. ಈ ಸರ್ಕಾರಕ್ಕೆ ಬೆನ್ನು ಮೂಳೆಯೇ ಇಲ್ಲ. ಇವರು ಸ್ಟಾಲಿನ್ ವಿರುದ್ಧ ಒಂದು ಹೇಳಿಕೆ ನೀಡಲಿ ನೋಡೋಣ? ಸಿದ್ದರಾಮಯ್ಯ ಎದುರಾಳಿಗಳ ವಿರುದ್ಧ ಉಡಾಫೆಯಿಂದ ಕೂಗಾಡುತ್ತಾರೆ. ಆದರೆ, ಸ್ಟಾಲಿನ್ ವಿರುದ್ಧ ಏತಕ್ಕೆ ಧ್ವನಿ ಎತ್ತುತ್ತಿಲ್ಲ. ಸ್ಟಾಲಿನ್ ವಿರುದ್ಧ ಮಾತಾಡಲು ಕಾಂಗ್ರೆಸ್‌ನ ಎಲ್ಲ ನಾಯಕರಿಗೆ ತೊಡೆ ನಡುಗುತ್ತದೆ ಎಂದು ವ್ಯಂಗ್ಯವಾಡಿದರು.