ಜಿಲ್ಲೆ

ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ಸೃಷ್ಟಿ

Haveri

ಹಾನಗಲ್ಲ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಜಗತ್ತೇ ಒಪ್ಪಿಕೊಂಡಿದೆ. ದೇಶದ 135 ಕೋಟಿ ಜನರ ಮನೆಬಾಗಿಲಿಗೆ ಒಂದಿಲ್ಲೊಂದು ಯೋಜನೆಯ ಲಾಭ ದೊರಕುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ಸೃಷ್ಟಿಯಾಗಿದೆ ಎಂದು ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಉದ್ದಗಲಕ್ಕೂ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಸ್ವಾಗತ ದೊರಕಿದೆ. ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿಯವರೂ ಇದೇ ಜಿಲ್ಲೆಯವರಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ. ಈ ಬಾರಿ ಹಾನಗಲ್ಲ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ-ವಾರಂಟಿ ಕಾರ್ಡ್ ತೋರಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಜನಪರ ಕೆಲಸ ಮಾಡಿದ್ದರೆ ಹೊಸ ಭರವಸೆ ನೀಡುವ ಅಗತ್ಯವಿರಲಿಲ್ಲ, ಬಿಜೆಪಿ ಸರ್ಕಾರ ತನ್ನ ರಿಪೋರ್ಟ್ ಕಾರ್ಡ್ ತೋರಿಸಿ ಮತ ಕೇಳುತ್ತಿದೆ. ದೇಶದ ಬಗ್ಗೆ ಅಭಿಮಾನವೇ ಇಲ್ಲದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂಗ್ಲೆಂಡ್​ನಲ್ಲಿ ಭಾರತೆ ಮಾನ ಹರಾಜು ಹಾಕುತ್ತಿದ್ದಾರೆ. ಮೋದಿ ಅವರನ್ನು ತೆಗಳುವುದಕ್ಕಾಗಿ ವಿದೇಶಕ್ಕೆ ಹೋಗಿ ದೇಶದ ಮರ್ಯಾದೆ ತೆಗೆದಿದ್ದು ಸರಿಯೇ? ರಾಜ್ಯದ ಜನತೆ ಇಂಥವರ ನಾಯಕತ್ವದ ಪಕ್ಷಕ್ಕೆ ಮತ ನೀಡುವಷ್ಟು ದಡ್ಡರಲ್ಲ. ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ವಿವೇಕಾನಂದ ಡಬ್ಬಿ, ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಮಾತನಾಡಿದರು. ತಾಲೂಕಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೇಲಗಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಶಶಿಧರ ಹೊಸಳ್ಳಿ, ಪದ್ಮನಾಭ ಕುಂದಾಪುರ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ರಾಜಶೇಖರಗೌಡ ಕಟ್ಟೇಗೌಡರ, ಕೃಷ್ಣಾ ಈಳಿಗೇರ, ಬಸವರಾಜ ಹಾದಿಮನಿ, ರಾಜಣ್ಣ ಗೌಳಿ, ಬಿ.ಎಸ್. ಅಕ್ಕಿವಳ್ಳಿ, ಎ.ಎಸ್. ಬಳ್ಳಾರಿ, ಮಹೇಶ ಕಮಡೊಳ್ಳಿ, ಬಿ.ಕೆ. ಮೋಹನಕುಮಾರ, ನಂದಿನಿ ವಿರುಪಣ್ಣನವರ, ರೇಖಾ ಕರಿಭೀಮಣ್ಣನವರ, ಎಸ್.ಎಂ. ಕೋತಂಬ್ರಿ, ರಾಜು ಗೌಳಿ, ಪ್ರಶಾಂತ ಪೂಜಾರ, ಕುಮಾರ ಲಕ್ಮೋಜಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಜಣ್ಣ ಪಟ್ಟಣದ ಇತರರು ಉಪಸ್ಥಿತರಿದ್ದರು.