ಮಂಗಳೂರು : ವಿಶ್ವದಲ್ಲಿ ಅತೀ ದೊಡ್ಡ ಸಾರ್ವತ್ರಿಕ ಚುನಾವಣೆ ಆದ ಭಾರತ ದೇಶದ ಲೋಕಸಭಾ ಚುನಾವಣೆಯ ಪರ್ವದಲ್ಲಿ ಪ್ರತಿಯೊಬ್ಬ ನಾಗರಿಕರು ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಪ್ರಯತ್ನಿಸಬೇಕು ಎಂದು ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಡಾ.ದೇವದಾಸ ರೈ ಕರೆ ನೀಡಿದ್ದಾರೆ.
ನಗರದ ವುಡ್‌ಲ್ಯಾಂಡ್ ಸಭಾಂಗಣದಲ್ಲಿ ಮಂಗಳವಾರ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಟರ‌್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಹಾಗೂ ಇನ್ನರ್‌ವೀಲ್ ಕ್ಲಬ್ ಮಂಗಳೂರು ನಾರ್ತ್ ಸಂಸ್ಥೆಗಳ ಆಶ್ರಯದಲ್ಲಿ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಸಯೋಗದೊಂದಿಗೆ ಆಯೋಜಿಸಿದ ಮತದಾನದ ಮಾಹಿತಿ, ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮತದಾನ ದೇಶದ ಸಂವಿಧಾನ ನಾಗರಿಕರಿಗೆ ನೀಡಿದ ಹಕ್ಕು ಅದನ್ನು ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ಯಾವುದೇ ಅಮಿಷಕ್ಕೆ ಒಳಪಡದೆ ನಿರ್ಭಿತಿಯಿಂದ ನಮ್ಮ ಕರ್ತವ್ಯವೆಂದು ಪರಿಗಣಿಸಿ ಚಲಾಯಿಸಬೇಕೆಂದರು.
ದ.ಕ. ಜಿಲ್ಲಾ ಸ್ವೀಪ್ ಪ್ರಚಾರ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ವಯಸ್ಕರ ಶಿಕ್ಷಣಾ ಇಲಾಖೆಯ ಅಧಿಕಾರಿಯವರಾದ ಲೋಕೇಶ್‌ರವರು ಮತದಾನದ ಪ್ರತಿಜ್ಞಾ ವಿಧಿ ವಿಧಾನವನ್ನು ನೇರವೇರಿಸಿದರು.
ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಪ್ರಾಂಶುಪಾಲೆ ಮಾಲಿನಿ ಹೆಬ್ಬಾರ್ ಮತದಾನದ ಮಾಹಿತಿ ಮತ್ತು ಜಾಗೃತಿ ನೀಡಿ ನಾಗರಿಕರು ತಮ್ಮ ಬಂಧು ಮಿತ್ರರು, ನೆರೆಕರೆಯವರನ್ನು ಪ್ರೇರೆಪಿಸಿ ಮತದಾನದ ಕಟ್ಟೆಗೆ ಕೊಂಡುಹೋಗುವ ಜವಾಬ್ದಾರಿಯನ್ನು ವಹಿಸಬೇಕೆಂದರು.
ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಗೀತಾ ರೈ ಯವರು ಭಾರತೀಯ ಚುನಾವಣಾ ಆಯೋಗ ಮುದ್ರಿಸಿದ ಮತದಾನ ಜಾಗೃತಿ ಭಿತ್ತಿ ಪತ್ರ ಅನಾವರಣಗೊಳಿಸಿದರು. ನಾಗೇಂದ್ರರವರು ಮತದಾನದ ಮಹತ್ವದ ಅರಿವು ಮೂಡಿಸುವ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ರೋಟರಿ ಕ್ಲಬ್ ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ರೋಟರ‌್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷ ಅರ್ಜುನ್ ಪ್ರಕಾಶ್ ವಂದಿಸಿದರು. ದ.ಕ. ಜಿಲ್ಲಾ ಸ್ವೀಪ್ ಪ್ರಚಾರ ಸಮಿತಿಯ ಸದಸ್ಯೆ ಹಾಗೂ ಜಿಲ್ಲಾ ಹಿರಿಯ ಕಾರ್ಮಿಕ ನಿರೀಕ್ಷ ಮೇರಿ ಫೆಡ್ರಿಕ್ ಡಾಯಸ್ ವೀಕ್ಷಕರಾಗಿ ಭಾಗವಹಿಸಿದರು.