ಮೈಸೂರು: ಹಾಡಿಗಳಲ್ಲಿ ಶುದ್ಧ ಕುಡಿಯುವ ನೀರು, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಹಾಗೂ ಆಶ್ರಮ ಶಾಲೆ ಭೇಟಿ ಸೇರಿದಂತೆ ಒಟ್ಟಾರೆ ಮೂಲಸೌಕರ್ಯ ಕಲ್ಪಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹುಣಸೂರು ತಾಲೂಕಿನ ಬಿಳಿಕೆರೆ, ಚಿಲ್ಕುಂದ ಹಾಗೂ ನೇರಳಕುಪ್ಪೆ ಗ್ರಾಮ ಪಂಚಾಯಿತಿಗಳಿಗೆ ಬುಧವಾರ ಭೇಟಿ ನೀಡಿದ ಅವರು, ಮೂಲಸೌಲಭ್ಯಗಳ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಕಂಡು ಬಂದ ಸಾಕಷ್ಟು ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಾಡಿ ಪ್ರದೇಶಗಳಿರುವುದರಿಂದ ಇಲ್ಲಿರುವ ಪ್ರತಿ ಮನೆಗಳಿಗೂ ಜಲಜೀವನ ಮಿಷನ್(ಜೆಜೆಎಂ) ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಾಲ ಕಾಲಕ್ಕೆ ಇಲ್ಲಿನ ಜನರಿಗೆ ಆರೋಗ್ಯ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಪಂಚಾಯಿತಿ ಮತ್ತು ಗ್ರಂಥಾಲಯ ಎರಡು ಒಂದೇ ಕಟ್ಟಡದಲ್ಲಿದ್ದುದ್ದರಿಂದ ಹೊಸದಾಗಿ ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದರೂ ಸದುಪಯೋಗಪಡಿಸಿಕೊಳ್ಳದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಇದಕ್ಕೂ ಮುನ್ನ ಬಿಳಿಕೆರೆ ಮತ್ತು ಚಿಲ್ಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಿಂದ ಅನುಷ್ಠಾನವಾಗುತ್ತಿರುವ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲಸಕ್ಕಾಗಿ ಬೇರೆಡೆಗೆ ತೆರಳುವ ಮಹಿಳೆಯರ ಮನವೊಲಿಸಿ ಸ್ಥಳೀಯ ಪ್ರದೇಶದಲ್ಲಿಯೇ ನರೇಗಾದಿಂದ ಉದ್ಯೋಗ ನೀಡುವ ಮೂಲಕ ಶೇ.60ಕ್ಕೂ ಹೆಚ್ಚಿನ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಯನ್ನು ಸ್ಥಳೀಯವಾಗಿ ಹಾಗೂ ಪರಿಸರ ದೃಷ್ಟಿಯಿಂದ ಕ್ರಮ ಕೈಗೊಳ್ಳುವ ಮೂಲಕ ಗ್ರಾಮಸ್ಥರ ಸಹಕಾರದೊಂದಿಗೆ ಕ್ರಮ ಕೈಗೊಳ್ಳುವುದಾಗಿ ಪಿಡಿಒ ಅವರಿಗೆ ಸಲಹೆ ನೀಡಿದರು. ಅಲ್ಲದೇ, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಗೃಹಕ್ಕೆ ಬೇಡಿಕೆಯನ್ನು ಪಡೆದುಕೊಳ್ಳುವಂತೆ ಮತ್ತು ಸಮಪರ್ಕವಾಗಿ ಶುದ್ಧ ನೀರು ನಿರ್ವಹಣೆ ಘಟಕ, ತೆರಿಗೆ ವಸೂಲಿ, ಇ-ಸ್ವತ್ತು ನವೀಕರಣ ಮಾಡುವಂತೆ ಹೇಳಿದರು.
ಬಳಿಕ, ಸಂಜೀವಿನಿ ಸ್ವಸಹಾಯ ಸಂಘದಲ್ಲಿರುವ ಹಾಡಿ ಮಹಿಳೆಯರ ಮೂಲಕ ಗುಂಪು ಚಟುವಟಿಕೆ ನಡೆಸಿ, ಕಾಡಿನ ಉತ್ಪನ್ನಗಳಾದ ಜೇನು, ಬೆಟ್ಟದ ನೆಲ್ಲಿಕಾಯಿ ಮತ್ತು ಕಾರೇಹಣ್ಣನು ಸಂಗ್ರಹಿಸಿ ಅದರ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಕೆಗೆ ಮುಂದಾಗುವಂತೆ ಸಲಹೆ ನೀಡಿದರು.
ಈ ಕುರಿತು ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನುಮತಿ ದೊರಕಿಸಿಕೊಡಲಾಗುವುದು ಎಂದು ಹೇಳಿದರು. ಬಳಿಕ ಒಕ್ಕೂಟದಿಂದ ಸಾಲ ಪಡೆದ ಸಂಘದ ಸದಸ್ಯರಾದ ಚಲಾವತಿ ಅವರ ಟೈಲರಿಂಗ್ ಮತ್ತು ಫ್ಯಾನ್ಸಿ ಸ್ಟೋರ್ಸ್‌ಗೆ ಭೇಟಿ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು, ಎಇಇ ನರಸಿಂಹಯ್ಯ, ಎಸ್‌ಬಿಎಂ ಸಂಯೋಜಕಿ ಸವಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜು, ಮಹದೇವಸ್ವಾಮಿ, ರವಿ ಇತರರು ಇದ್ದರು.