ಜಿಲ್ಲೆ

ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಅಪರಾಧ ಚಟುವಟಿಕೆ ಆಗಿದ್ದು, ಈ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಸರಣಿ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಕೋರ್ ಜಿಲ್ಲಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡ್ರಗ್ಸ್​ ದಂಧೆ ತಡೆಯಲು, ಯುವ ಸಮೂಹವನ್ನು ಮಾದಕ ವಸ್ತಗಳಿಂದ ದೂರವಿಡಲು ಎಲ್ಲರ ಸಹಕಾರ ಮುಖ್ಯ. ವಿದ್ಯಾರ್ಥಿಗಳ, ಪಾಲಕರ ಹಾಗೂ ಶಿಕ್ಷಕರ ನಡುವೆ ಉತ್ತಮ ಸಂಪರ್ಕ ಮತ್ತು ಸಮನ್ವಯ ಸಾಧಿಸಬೇಕು. ಪ್ರತಿ ಶಾಲೆ, ಕಾಲೇಜುಗಳಲ್ಲಿ ಆಯೋಜಿಸುವ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿ ಮತ್ತು ಪಾಲಕರ ಸಮಾವೇಶ ನಡೆಸಿ ಡ್ರಗ್ಸ್​ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಪೊಲೀಸ್​ ಮತ್ತು ಕಾಲೇಜು ಶಿಕ್ಷಣ ಇಲಾಖೆ ಈ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು ಎಂದರು.

ಕೆಲ ಔಷಧ ಅಂಗಡಿಗಳಲ್ಲಿ ನಿಷೇಧಿತ ಮಾತ್ರೆ, ಅನುಮತಿ ಇಲ್ಲದ ಔಷಧಿ ಮಾರುತ್ತಿರುವ ಮಾಹಿತಿ ಇದೆ. ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಿಮಿನಲ್​ ಕೇಸ್​ ದಾಖಲಿಸಿ ಅಂಗಡಿ ಸೀಜ್​ ಮಾಡಬೇಕು. ಡ್ರಗ್ಸ್​ದಂತಹ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಸಂಶಯ ಬಂದ ಪ್ರಕರಣಗಳಲ್ಲಿ ತಪಾಸಣೆ ಮಾಡಲಾಗಿದೆ. ಮಾದಕ ವ್ಯಸನ ಸರಬರಾಜು ಮಾಡುವ ಪೆಡ್ಲರ್​, ಮತ್ತು ಡ್ರಗ್ಸ್​ ಸೇವಿಸುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ತಪಾಸಣೆ ತೀವ್ರಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಇನ್​ಸ್ಪೆಕ್ಟರ್​ ಶಿವಾನಂದ ಕಟಗಿ, ವಿಜಯಕುಮಾರ ಪಾಟೀಲ ಮಾತನಾಡಿದರು. ಡಾ. ಸಂಜಯ ಕೊಟಬಾಗಿ, ಡಾ. ಎಸ್​.ಕೆ. ಪವಾರ, ಡಾ. ಸರೋಜಿನಿ ಕರಕಣ್ಣವರ, ಡಾ. ದರ್ಶನ ಎನ್​.ಎಸ್​., ಡಾ. ಕಿರಣಕುಮಾರ, ಎಸ್​.ಎಸ್​. ಕೆಳದಿಮಠ, ವಿವೇಕ ಕವರಿ, ಅಜಯ ಮುದಗಲ್ಲ, ಅರುಣಕುಮಾರ ಕೆ., ಡಾ. ಕೀತಿರ್ಕುಮಾರ, ಪಿ.ಎ.ಪಾಟೀಲ, ಡಾ. ಮಂಜುನಾಥ, ಇತರರು ಇದ್ದರು.