ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ತ್ರೈಮಾಸಿಕ ಸಭೆ ನಡೆಸಿದರು. ಸದಸ್ಯ ಜಂಬುಕುಮಾರ ಬಾಗೇವಾಡಿ, ಅಲ್ಲಾಬಕ್ಷ ಬಿಜಾಪುರ ಮತ್ತಿತರರಿದ್ದಾರೆ.  
ಜಿಲ್ಲೆ

ಅಲ್ಪಸಂಖ್ಯಾತರ ಯೋಜನೆ ಕುರಿತು ಜಾಗೃತಿ ಮೂಡಿಸಿ; ಎಡಿಸಿ ಸೋಮಲಿಂಗ ಗೆಣ್ಣೂರ ಸೂಚನೆ

Vijyapura - Parsuram Bhasagi

ವಿಜಯಪುರ: ಅಲ್ಪಸಂಖ್ಯಾತ ವಿವಿಧ ವೃತ್ತಿಪರ ಕೋರ್ಸ್‌ಗಳ ಕಲಿಕೆ ಸೇರಿದಂತೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿ ಪ್ರಮಾಣ ಹೆಚ್ಚಿಸಲು ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತ ಪರಿಶೀಲನಾ ಸಮಿತಿಯ 4ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಐಟಿಐ ಕಾಲೇಜಿನ ಕೆಲವು ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸುತ್ತಿರುವು ಕಂಡು ಬಂದಿದೆ. ಇಂತಹ ವಿದ್ಯಾರ್ಥಿಗಳ ಮನವೊಲಿಸಿ ಕಲಿಕೆ ಮುಂದುವರೆಸಲು ಸೂಕ್ತ ಅರಿವು ಮೂಡಿಸಿ ಕಾಲೇಜು ದಾಖಲಾತಿ ಕಡಿಮೆಯಾಗದಂತೆ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿಗಳ ಹೊಸ ಹದಿನೈದು ಅಂಶಗಳ ಕಾರ್ಯಕ್ರಮದಡಿ ಮೆಟ್ರಿಕ್ ಪೂರ್ವ ಒಟ್ಟು 21,438 ವಿದ್ಯಾರ್ಥಿಗಳ ಖಾತೆಗೆ ರೂ.3,04,23000, ಮೆಟ್ರಿಕ್ ನಂತರದ 3,305ವಿದ್ಯಾರ್ಥಿಗಳಿಗೆ 5,13,06,228 ಹಾಗೂ ಡಿಇಡಿ ಮತ್ತು ಬಿಇಡಿ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ಪ್ರೋತ್ಸಾಹಧನ ರೂಪದಲ್ಲಿ 112 ವಿದ್ಯಾರ್ಥಿಗಳಿಗೆ ರೂ.2,80,000 ವೇತನವನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ ಎಂದರು.

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತ ಪರಿಶೀಲನಾ ಸಮಿತಿಯ ಸಭೆಯ ಸದಸ್ಯ ಅಲ್ಲಾಬಕ್ಷ ಬಿಜಾಪುರ ಮಾತನಾಡಿ, ಜಿಲ್ಲೆಯಲ್ಲಿ ಐಟಿಐ ಕಾಲೇಜುಗಳಿಂದ ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಉದ್ಯೋಗಕ್ಕಾಗಿ ಬೇರೆಡೆ ಹೋಗದಂತೆ ಜಿಲ್ಲೆಯ ಕೂಡಗಿಯ ಬೃಹತ್ ಎನ್‌ಟಿಪಿಸಿ ಉದ್ದಿಮೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ ಉದ್ಯೋಗ ದೊರಕಿಸಲು ಕ್ರಮ ವಹಿಸಬೇಕು. ನಗರದ ಬಸ್ ನಿಲ್ದಾಣ ಹತ್ತಿರ ಚರಂಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಬರುವ ಶೈಕ್ಷಣಿಕ ವಾಹೆಯಲ್ಲಿ ಮೌಲಾನಾ ಅಬ್ದುಲ್ ಕಲಾಂ ವಸತಿ ಶಾಲೆ ಕಟ್ಟಡ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.

ಸದಸ್ಯ ಜಂಬುಕುಮಾರ ಬಾಗೇವಾಡಿ ಮಾತನಾಡಿ, ಜಿಲ್ಲೆಯಲ್ಲಿರುವ ಜೈನ್ ಬಸದಿಗಳ ಮಾಹಿತಿ ಹಾಗೂ ಅಲ್ಲಿಯ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರ ಮಾಹಿತಿ ಈಗಾಗಲೇ ಒದಗಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ ಮತ್ತಿತರರಿದ್ದರು.