ಜಿಲ್ಲೆ

ಪರಿಶಿಷ್ಟರ ಸೌಲಭ್ಯ ಕುರಿತು ಜಾಗೃತಿ ಮೂಡಿಸಿ: ವೆಂಕಟ್ ರಾಜಾ

ಮಡಿಕೇರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದವರಿಗೆ ಇರುವ ಸೌಲಭ್ಯಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಸೋಮವಾರ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ(ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದವರಿಗಾಗಿರುವ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಅಧಿಕಾರಿಗಳ ಜೊತೆ ಪ್ರತಿಯೊಬ್ಬರು ಕೈಜೋಡಿಸಬೇಕು. ಕಾನೂನು ಪ್ರಕಾರ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ಹೇಳಿದರು.

ಸಮಿತಿ ನೂತನ ಸದಸ್ಯ ಜೆ.ಎಲ್.ಜನಾರ್ಧನ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುವ ಪ್ರದೇಶದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸುವಂತಾಗಬೇಕು. ಪಡಿತರ ಚೀಟಿಯನ್ನು ಆದ್ಯತೆ ಮೇಲೆ ವಿತರಿಸುವಂತಾಗಬೇಕು. ಪರಿಶಿಷ್ಟರ ಕಾಲೋನಿಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ವಸತಿ ಸೌಲಭ್ಯ ಹೀಗೆ ಹಲವು ಮೂಲ ಸೌಲಭ್ಯ ಒದಗಿಸಬೇಕು. ಜೊತೆಗೆ ಹಕ್ಕುಪತ್ರವನ್ನು ವಿತರಿಸುವಂತಾಗಬೇಕು ಎಂದು ಮನವಿ ಮಾಡಿದರು.

ಮತ್ತೊಬ್ಬ ಸದಸ್ಯ ಜಾಯ್ಸ ಮೆನೇಜಸ್ ಮಾತನಾಡಿ, ಮಹಿಳಾ ಎಸ್‌ಸಿಎಸ್‌ಟಿ ಗುಂಪುಗಳನ್ನು ಆರ್ಥಿಕವಾಗಿ ಬಲಪಡಿಸಲು ಮುಂದಾಗಬೇಕು. ಬಾಳೆಗುಂಡಿ, ಬಜೆಗುಂಡಿ, ವಾಲ್ನೂರು ಮತ್ತಿತರ ಕಾಲೋನಿಗಳಲ್ಲಿ ವಾಸಿಸುವ ಪರಿಶಿಷ್ಟ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡುವಂತಾಗಬೇಕು ಎಂದು ಕೋರಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಊರುಡುವೆ ಜಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳು ವಾಸಿಸುತ್ತಿದೆ. ಈ ಜಾಗಕ್ಕೆ ಹಕ್ಕುಪತ್ರ ವಿತರಿಸುವ ಬಗ್ಗೆ ಕಳೆದ ಬಾರಿ ಚರ್ಚಿಸಲಾಗಿತ್ತು. ಅದರಂತೆ ಕ್ರಮಕೈಗೊಳ್ಳಲಾಗಿದೆ ಎಂದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ೨೦೦೫ ರೊಳಗೆ ವಾಸಿಸುತ್ತಿರುವವರ ಬಗ್ಗೆ ದಾಖಲೆಗಳನ್ನು ನೀಡಬೇಕು. ಊರುಡುವೆ ಜಾಗವು ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಬರಲಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಾದಾಪುರ ರಸ್ತೆಯು ಹಿರಿಸೇವೆ-ಚೆಟ್ಟಳ್ಳಿ ರಾಜ್ಯ ಹೆದ್ದಾರಿಯಾಗಿದ್ದು, ಪ್ರಸಕ್ತ ವಾರ್ಷಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದ್ದು, ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದು ಶೇಖರ್ ತಿಳಿಸಿದರು.

ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‌ಗಳ ಜಾಗೃತಿ ಸಮಿತಿ ಸಭೆ: ಬಳಿಕ ನಡೆದ ಸಫಾಯಿ ಕರ್ಮಚಾರಿಗಳ/ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‌ಗಳ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಮಿತಿ ಸದಸ್ಯ ರಂಗಸ್ವಾಮಿ, ಪೌರಕಾರ್ಮಿಕರಿಗೆ ವಿವಿಧ ಅಭಿವೃದ್ಧಿ ನಿಗಮದಲ್ಲಿ ನೇರ ಸಾಲ ಯೋಜನೆ ಒದಗಿಸುವಂತಾಗಬೇಕು. ಗೋಣಿಕೊಪ್ಪದಲ್ಲಿ ಎರಡು ಪೌರಕಾರ್ಮಿಕ ಕುಟುಂಬಗಳು ವಾಸ ಮಾಡುತ್ತಿದ್ದು, ಈ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲದೆ ತುಂಬಾ ಗಂಭೀರ ಸಮಸ್ಯೆಯಾಗಿದೆ. ಈ ಬಗ್ಗೆ ಗ್ರಾ.ಪಂ.ಪಿಡಿಒ ಅವರು ಬಗೆಹರಿಸಬೇಕು ಎಂದ ಅವರು, ಸಿದ್ದಾಪುರದಲ್ಲಿ ಪೌರಕಾರ್ಮಿಕರಿಗೆ ಹಲವು ಸೌಲಭ್ಯ ಕಲ್ಪಿಸಬೇಕು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಕೋರಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ತಾ.ಪಂ.ಇಒ ಮತ್ತು ಸಮಿತಿ ಸದಸ್ಯರು ಸಿದ್ದಾಪುರಕ್ಕೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಬಗೆ ಹರಿಸಬೇಕು ಎಂದು ಸೂಚಿಸಿದರು.

ಶೇ.೯೫ ರಷ್ಟು ಪ್ರಗತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಪ್ರಸಕ್ತ ವರ್ಷದಲ್ಲಿ ಶೇ.೯೫ ರಷ್ಟು ಪ್ರಗತಿ ಸಾಧಿಸಲಾಗಿದೆ. ಮಾ.೨೯ ರವರೆಗೆ ಶೇ.೧೦೦ ರಷ್ಟು ಪ್ರಗತಿ ಸಾಧಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ತಹಶೀಲ್ದಾರ್ ಪ್ರವೀಣ್ ಕುಮಾರ್, ತಾ.ಪಂ.ಇಒ ಅಪ್ಪಣ್ಣ, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳಾದ ನಾಚಪ್ಪ, ಕೃಷ್ಣಪ್ರಸಾದ್, ಸತೀಶ್, ಇತರರು ಇದ್ದರು.