ಜಿಲ್ಲೆ

ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ

ಪ್ರಸಿನ್ ಕೆ.ಆರ್

ಚನ್ನರಾಯಪಟ್ಟಣ: ಮಳೆಗಾಲ ಆರಂಭವಾಗಿದ್ದು, ಡೆಂೆ ಮತ್ತು ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ಬಿ.ಎಂ.ಗೋವಿಂದರಾಜು ನಿರ್ದೇಶನ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ ಡೆಂೆ ಜ್ವರ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಅರಿವು ಕುರಿತು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗಗಳ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಡೆದ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಎಲ್ಲರ ಸಹಕಾರ ಅಗತ್ಯ. ಎಲ್ಲ ಇಲಾಖೆಗಳು ಸಾಂಕ್ರಾಮಿಕ ರೋಗ ತಡೆಯುವ ಜವಾಬ್ದಾರಿ ನಿಭಾಯಿಸಿದಲ್ಲಿ ಸಾಕಷ್ಟು ಸಮಸ್ಯೆಗಳು ನಿವಾರಣೆ ಆಗುತ್ತವೆ. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.

ಈ ಬಾರಿ ಹೆಚ್ಚಿನ ಮಳೆಯಾಗುವ ಸಂಭವವಿದ್ದು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಮಕ್ಕಳಿಗೆ ಅರಿವು ಮೂಡಿಸಬೇಕು. ಜನಸಾಮಾನ್ಯರು ಜವಾಬ್ದಾರಿ ಅರಿತು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಸಭೆ ಏರ್ಪಡಿಸಿ ಜಾಗೃತಿ ಮೂಡಿಸಬೇಕು. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ಹಾಗೂ ಸಿದ್ಧತೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ನಾಗರಾಜ್, ಪುರಸಭಾ ಮುಖ್ಯಾಧಿಕಾರಿ ಕೆ.ಎನ್. ಹೇಮಂತ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಅರ್ಚನಾ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್‌ಮೂರ್ತಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗಗಳ ಇಲಾಖೆಯ ಅಧಿಕಾರಿ ಅನಂತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಿವಶಂಕರ್, ತಾಲೂಕು ಆರೋಗ್ಯ ಅಧಿಕಾರಿ ಎ.ಎನ್.ಕಿಶೋರ್‌ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್. ಅನಿತಾ, ಕೆ.ಎಂ.ಪುಷ್ಪಾವತಿ, ಡಾ.ನಾಗಪ್ಪ, ಜಿಲ್ಲಾ ಕೀಟಶಾಸ್ತ್ರಜ್ಞ ರಾಜೇಶ್ ಕುಲಕರ್ಣಿ, ಡಾ.ಶೀತಲ್, ಮಂಜುಳಾ, ಶಿವಲಿಂಗಯ್ಯ, ಆಶಾ, ಶೋಭಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.