ಜಿಲ್ಲೆ

ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿ. ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸಬೇಡಿ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್​ಇಪಿ)ಯನ್ನು ರದ್ದುಪಡಿಸಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ ಎಂದು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಕೃಷಿ ವಿವಿಯ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗದಗ ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಬಾಲಭವನ ಸೊಸೈಟಿ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚಿಣ್ಣರ ಚಿತ್ರ ಚಿತ್ತಾರ ಕಾರ್ಯಕ್ರಮದಲ್ಲಿ ಪುಟ್ಟ ಕಲಾವಿದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಯಾವುದೇ ರಾಜ್ಯ ಸರ್ಕಾರವಿದ್ದರೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೆಲ ಬದಲಾವಣೆ ಮಾಡಬೇಕೆ ಹೊರತು, ಅದನ್ನು ರದ್ದು ಮಾಡುವುದು ಸರಿಯಲ್ಲ. ರಾಜ್ಯ ಶಿಕ್ಷಣ ನೀತಿ ಸಹ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದರಿಂದ ಶಿಕ್ಷಣ ಕ್ಷೇತ್ರ ಗೊಂದಲಮಯವಾಗಿದೆ. ಪ್ರಸ್ತುತ ಶಾಲೆಗಳ ಪಠ್ಯಕ್ರಮ ಬದಲಿಸಬೇಕಿದೆ. ಪಠ್ಯಕ್ರಮದಲ್ಲಿ ಚಿತ್ರಕಲೆ, ದೈಹಿಕ ಶಿಕ್ಷಣ, ಸಂಗೀತಕ್ಕೆ ಆದ್ಯತೆ ನೀಡಬೇಕು. ಇದರಿಂದ ಮಕ್ಕಳ ಸರ್ವಾಂಗೀಣ ವಿಕಸನ ಸಾಧ್ಯ ಎಂದರು.
ವಿಧಾನ ಪರಿಷತ್​ ಸದಸ್ಯ ಪ್ರೊ. ಎಸ್​.ವಿ.ಸಂಕನೂರ ಮಾತನಾಡಿ, ಸರ್ಕಾರಗಳು ಪ್ರೋತ್ಸಾಹ ನೀಡದ ಹಿನ್ನೆಲೆಯಲ್ಲಿ ನೃತ್ಯ, ಸಂಗೀತ ವಿದ್ಯಾಲಯಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕಳೆದ 20 ವರ್ಷಗಳಿಂದ ಸರ್ಕಾರ ಚಿತ್ರಕಲಾ ಶಿಕ್ಷಕರ ನೇಮಕ ಮಾಡಿಲ್ಲ. ಖನಿಜ ಸಂಪತ್ತಿನಂತೆ ಸಂಗೀತ, ಚಿತ್ರಕಲೆ, ಶಿಲ್ಪಕಲೆ ಸೇರಿ ಎಲ್ಲ ಕಲೆಗಳೂ ದೇಶದ ಸಂಪತ್ತು ಎಂದು ಪರಿಗಣಿಸಬೇಕು ಎಂದರು.
ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ 2 ವರ್ಷಕ್ಕೊಮ್ಮೆ ಕಲಾ ಸಮ್ಮೇಳನ ಆಯೋಜಿಸಲು ಸರ್ಕಾರ ಮುಂದಾಗಬೇಕು ಎಂದರು.
ಕೃವಿವಿ ಕುಲಪತಿ ಡಾ.ಪಿ.ಎಲ್​. ಪಾಟೀಲ, ಕುಲಸಚಿವೆ ಜಯಶ್ರೀ ರಾಯಕೋಡ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮೋಹನ ಸಿದ್ದಾಂತಿ, ಕವಿವಿ ಕುಲಪತಿ ಕೆ.ಬಿ.ಗುಡಸಿ, ಇತರರು ಇದ್ದರು.
ವಿಜಯ ಕಿರೇಸೂರ ಸ್ವಾಗತಿಸಿದರು. ನೂರಅಹ್ಮದ ಮಕಾನದಾರ ಮತ್ತು ದ್ವಾರಕೀಶರಡ್ಡಿ ನಿರೂಪಿಸಿದರು.