ರಟ್ಟಿಹಳ್ಳಿ: ಮದಗದ ಕೆರೆ ಸಮೃದ್ಧವಾಗಿದೆ. ಈ ಕೆರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮದಗದ ಕೆಂಚಮ್ಮನ ಕೆರೆಯ ಬಳಿ ಇರುವ ದೇವಸ್ಥಾನದ ಆವರಣದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಆಯೋಜಿಸಿದ್ದ ವಿದಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮದಗದ ಕೆರೆಗೆ ಬಾಗಿನ ಅರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಾಧಿಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಮದಗದ ಕೆರೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ, ಪ್ರತ್ಯೇಕ ಪ್ರಾಧಿಕಾರ ರಚನೆಗೆ ಸರ್ಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಶಾಸಕ ಯು.ಬಿ. ಬಣಕಾರ ಅವರು ಪ್ರಯತ್ನಿಸಬೇಕು ಎಂದರು.
ರಾಜ್ಯದ ಅನೇಕ ನಗರಗಳಲ್ಲಿ ನದಿಗಳು ಬತ್ತಿಹೋಗಿ ಜಲಸಂಪತ್ತು ಕ್ಷೀಣಿಸುತ್ತಿದೆ. ನದಿಗಳು, ಕೆರೆಗಳು, ಜಲಸಂಪತ್ತನ್ನು ರಕ್ಷಣೆ ಮಾಡಿದರೆ ಇತರೆ ರಾಜ್ಯಗಳಿಗೆ ಕುಡಿಯುವ ನೀರಿಗಾಗಿ ಬೇಡುವ ಅವಶ್ಯಕತೆ ಇರುವುದಿಲ್ಲ. ಶಾಸಕ ಯು.ಬಿ. ಬಣಕಾರ ಈ ಭಾಗದಲ್ಲಿ ಮದಗದ ಕೆರೆ ಪ್ರಾಧಿಕಾರವನ್ನು ರಚಿಸಿದರೆ, ಅವರ ಕೆಲಸವನ್ನು ಕ್ಷೇತ್ರದ ಜನತೆ ಸದಾ ಸ್ಮರಿಸುತ್ತಾರೆ ಎಂದರು.
ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು ಈ ಸನ್ಮಾನವನ್ನು ಪ್ರೋತ್ಸಾಹ ಎಂದು ಭಾವಿಸಿ, ಮುಂದಿನ ಹಂತದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿಬಾಯಿಸಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿದ ಬಳಿಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಪರಮೇಶಪ್ಪ ಹಲಗೇರಿ ಮಾತನಾಡಿ, ಸತತ 6ನೇ ಬಾರಿಗೆ ಸಮಾಜದಿಂದ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕೆರೆಗೆ ಬಾಗಿನ ಅರ್ಪಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಮೇಲೆ ಪಾಲಕರು ಇಟ್ಟಿರುವ ಭರವಸೆ ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀಗುರು ಮೂಕಪ್ಪ ಶಿವಯೋಗಿ ಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ ಆರ್ಶೀವಚನ ನೀಡಿದರು.
ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಸಾಹಿತಿ ಡಾ.ನಿಂಗಪ್ಪ ಚಳಗೇರಿ, ರಾಜೀವಗೌಡ ಪಾಟೀಲ, ಹೊಳೆಪ್ಪಗೌಡ, ರಾಘವೇಂದ್ರ ಹರವಿಶೆಟ್ಟರ್, ಕಾಂತೇಶ ಪಾಟೀಲ, ಮಲ್ಲಿಕಾರ್ಜುನ ಮಕರಿ, ಶಿವಾನಂದ ಪೂಜಾರ, ಕಾವ್ಯ ಪಾಟೀಲ, ರಾಜೇಶ್ವರಿ ಹರವಿಶೆಟ್ಟರ್, ಎಸ್.ಆರ್. ಅಂಗಡಿ, ನೀಲಮ್ಮ ಹೊಸಮನಿ, ಬಸವರಾಜ ಪೂಜಾರ, ಶೋಭ ಅಂಗಡಿ, ಸಮಾಜದ ಗಣ್ಯರು ಉಪಸ್ಥಿತರಿದ್ದರು. ಸಿ.ಎಸ್. ಚಕ್ರಸಾಲಿ ನಿರ್ವಹಿಸಿದರು.