ಜಿಲ್ಲೆ

ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ

Mysuru

ಮೈಸೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಮೈಸೂರು ನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿಯೂ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ (ಟಾಸ್ಕ್‌ಫೋರ್ಸ್) ರಚಿಸಲು ನಿರ್ಧರಿಸಲಾಗಿದೆ.

ಕರೊನಾ ವೈರಸ್ ನಿಯಂತ್ರಣ ಸಂಬಂಧ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಆಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ನಗರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಯಾ ಶಾಸಕರ ನೇತೃತ್ವದಲ್ಲಿ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು. ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್‌ಸೇಠ್ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಸಂಸದರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಬೇಕು. ಪ್ರತಿ ಮನೆ ಮನೆಗೂ ಸಂಪರ್ಕ ಮಾಹಿತಿಯ ಕರಪತ್ರಗಳನ್ನು ತಲುಪಿಸಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಯಾವುದೇ ನಾಗರಿಕರಿಗೆ ನೆಗಡಿ, ಕೆಮ್ಮಿನಂತಹ ಲಕ್ಷಣ ಕಂಡುಬಂದರೆ ಯಾರನ್ನು ಸಂಪರ್ಕಿಸಬೇಕು? ಯಾವ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು? ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು? ನೋಡಲ್ ಅಧಿಕಾರಿ ಯಾರು? ಆರೋಗ್ಯಾಧಿಕಾರಿ ಯಾರು? ಎಂಬ ಬಗ್ಗೆ ಕಿರು ಮಾಹಿತಿಯನ್ನು ಮೊಬೈಲ್ ಸಂಖ್ಯೆಯೊಂದಿಗೆ ನಮೂದಿಸಿ ಕರಪತ್ರವನ್ನು ಮನೆ, ಮನೆಗೆ ವಿತರಿಸಬೇಕು ಎಂದು ತಿಳಿಸಿದರು.

ಎಲ್ಲ ಕ್ಷೇತ್ರಗಳಿಗೂ ಪ್ರತ್ಯೇಕ ಉಸ್ತುವಾರಿ ವೈದ್ಯಾಧಿಕಾರಿಯೊಬ್ಬರನ್ನು ನೇಮಿಸಬೇಕು. ಹೆಚ್ಚು ಸೋಂಕಿತರು ಇರುವ ಎನ್.ಆರ್.ಕ್ಷೇತ್ರದಲ್ಲಿ ಸಂಸದರ ನೇತೃತ್ವದಲ್ಲಿ ಒಂದು ಪ್ರತ್ಯೇಕ ತಂಡ ರಚಿಸಿ ಅಧಿಕಾರಿಗಳನ್ನು ನಿಯೋಜಿಸಬೇಕು. ಪಾಸಿಟಿವ್ ಪ್ರಕರಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕು. ನಾಗರಿಕರು ಕರೆ ಮಾಡಿದ ಕೂಡಲೇ ಆರೋಗ್ಯ ಸಿಬ್ಬಂದಿ ಸ್ಪಂದಿಸಬೇಕು. ಇದರಲ್ಲಿ ಎಲ್ಲಿಯೂ ಲೋಪ ಆಗಬಾರದು. ಇದಕ್ಕಾಗಿ ಉಸ್ತುವಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಮೇಲುಸ್ತುವಾರಿ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಾತ್ರ ಸಂಪೂರ್ಣ ಮಾಹಿತಿ ತಿಳಿದು ಕೆಲಸ ಮಾಡುತ್ತಿದ್ದಾರೆ. ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಾವೇನು ಮಾಡುತ್ತಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕು. ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ಕರೊನಾ ಪ್ರಕರಣಗಳು ಹೆಚ್ಚಾಗಿರುವ ನರಸಿಂಹರಾಜ ಕ್ಷೇತ್ರದ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಕರಣ ಹೆಚ್ಚು ಕಂಡು ಬಂದಿರುವ ಪ್ರದೇಶದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇದೆಯೇ? ಕೋವಿಡ್ ಟೆಸ್ಟ್ ಮಾಡಿಸಿದಾಗ ಎಷ್ಟು ಸಮಯಕ್ಕೆ ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸುತ್ತೀರಿ ಎಂದು ಆರೋಗ್ಯಾಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.

ಇದಕ್ಕುತ್ತರಿಸಿದ ವೈದ್ಯಾಧಿಕಾರಿ, ಪಾಸಿಟಿವ್ ಪ್ರಕರಣಗಳಿದ್ದರೆ ಪರೀಕ್ಷೆ ಮಾಡಿಸಿದ 10 ಗಂಟೆಯೊಳಗೆ ವರದಿ ಬರಲಿದ್ದು, ತಕ್ಷಣ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕರೊನಾ ಕರ್ತವ್ಯಕ್ಕೆ ನಿಯೋಜಿಸಲು ‘ಡಿ’ ಗ್ರೂಪ್ ನೌಕರರ ಕೊರತೆ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ. ಸಾವಿನ ಪ್ರಕರಣಗಳು ಬಂದ ತಕ್ಷಣ ಕುಟುಂಬಕ್ಕೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕೂಡಲೇ ಮರಣ ಪ್ರಮಾಣ ಪತ್ರ ಕೊಡುವ ಕೆಲಸ ಆಗಲಿ ಎಂದು ನಿರ್ದೇಶನ ನೀಡಿದರು.