ಜಿಲ್ಲೆ

ಜಾತಿ ಜನಗಣತಿಗೆ ಪ್ರತ್ಯೇಕ ಆಯೋಗ ರಚಿಸಿ

ಅವಿನಾಶ್ ಜೈನಹಳ್ಳಿ

ಮೈಸೂರು: ಸರ್ಕಾರವು ಪ್ರತಿ ಜಾತಿಗಳ ಜನಗಣತಿ ನಡೆಸಿ ಸಮರ್ಥನೀಯ ದತ್ತಾಂಶವನ್ನು ಸಂಗ್ರಹಿಸಬೇಕು. ಇದಕ್ಕಾಗಿಯೇ ಪ್ರತ್ಯೇಕ ಆಯೋಗ ರಚನೆ ಮಾಡಬೇಕು ಎಂದು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ರವಿವರ್ಮಾ ಕುಮಾರ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಶನಿವಾರ ಆಯೋಜಿಸಿದ್ದ ‘ಮೀಸಲಾತಿ ಮತ್ತು ವರ್ಗೀಕರಣ’ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಗಳ ವರ್ಗೀಕರಣದ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವರ್ಗೀಕರಣದ ವಿಷಯದಲ್ಲಿ ಮುಂದಡಿ ಇಡಬೇಕು. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳಿವೆ. ಅದರಲ್ಲಿ ಸೃಶ್ಯರು ಹಾಗೂ ಅಸ್ಪಶ್ಯರು ಇದ್ದಾರೆ. ಅಸಮಾನತೆ ಈಗಲೂ ಇದೆ. ಆದ್ದರಿಂದ ವರ್ಗೀಕರಣ ಆಗಬೇಕು. ಇದಕ್ಕಾಗಿ ಯಾವ ಮಾನದಂಡವನ್ನು ಅನುಸರಿಸಬೇಕು ಎಂಬುದು ಶೈಕ್ಷಣಿಕ ವಲಯದಲ್ಲಿ ಹಾಗೂ ಪ್ರಾಜ್ಞರ ಮಟ್ಟದಲ್ಲಿ ಸಮಗ್ರ ಚರ್ಚೆಯಾಗಬೇಕು. ವರ್ಗೀಕರಣ ಸರಳವಾದ ವಿಷಯವೇನಿಲ್ಲ, ಅದು ಬಹಳ ಕ್ಲಿಷ್ಟಕರವಾದುದೇ ಆಗಿದೆ ಎಂದು ಹೇಳಿದರು.
ಪಟ್ಟಿಯಲ್ಲಿ ಈಗಿರುವ ಜಾತಿಗಳ ನಡುವೆಯೇ ವರ್ಗೀಕರಣ ಆಗಬೇಕು. ಯಾವುದನ್ನೂ ತೆಗೆದು ಹಾಕಬಾರದು, ಬೇರಾವುದನ್ನೂ ಹೊಸದಾಗಿ ಸೇರಿಸಲೂಬಾರದು. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು. ಉತ್ತರ ಭಾರತದ ಹಲವೆಡೆ ವರ್ಗೀಕರಣಕ್ಕೆ ವಿರೋಧ ವ್ಯಕ್ತವಾಗಿದೆ. ಈ ವಿಷಯದಲ್ಲಿ ಉತ್ತರ ಭಾರತಕ್ಕೂ-ದಕ್ಷಿಣ ಭಾರತಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಇಲ್ಲಿಯ ಪರಿಶಿಷ್ಟ ಜಾತಿಯವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಎದುರಿಸುತ್ತಿಲ್ಲ. ಹೀಗಾಗಿ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ವರ್ಗೀಕರಣದ ವಿಷಯದಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದರು.ಚೆನ್ನೈನ ತಮಿಳುನಾಡು ರಾಜ್ಯ ಶೈಕ್ಷಣಿಕ ನೀತಿಯ ಉನ್ನತ ಮಟ್ಟದ ಸಮಿತಿಯ ಸಂಯೋಜಕ ಪ್ರೊ.ಎಲ್.ಜವಹರ್ ನೀಸನ್ ‘ತಮಿಳುನಾಡು ಮಾದರಿ’, ನವದೆಹಲಿಯ ಜೆಎನ್‌ಯು ಪ್ರಾಧ್ಯಾಪಕ ವೈ.ಚಿನ್ನಾರಾವ್ ‘ಆಂಧ್ರಪ್ರದೇಶ-ತೆಲಂಗಾಣ ಮಾದರಿ’ ಹಾಗೂ ವಿದ್ಯಾವರ್ಧಕ ಕಾನೂನು ಕಾಲೇಜಿನ ಅಧ್ಯಾಪಕ ಡಾ.ಕೆ.ಎಲ್.ಚಂದ್ರಶೇಖರ ‘ಕರ್ನಾಟಕ ಮಾದರಿ’ ಕುರಿತು ವಿಚಾರ ಮಂಡಿಸಿದರು. ಭಾರತ ವಿವಿಯ ರಾಷ್ಟ್ರೀಯ ಕಾನೂನು ಶಾಲೆಯ ವಿಶ್ರಾಂತ ಕುಲಪತಿ ಪ್ರೊ.ಜಿ.ಮೋಹನ್ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್ ಇದ್ದರು.