ಬ್ಯಾಡಗಿ: ತಾಲೂಕಿನ ಕಾಗಿನೆಲೆಯಲ್ಲಿ 23 ಕೋ.ರೂ. ವೆಚ್ಚದ ವಿವಿಧ ಕಾಮಗಾರಿ ಮಾಡಲಾಗಿದೆ ಎಂದು ನೀರಾವರಿ ನಿಗಮ (ಯುಟಿಪಿ) ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಷ್ಟೊಂದು ಕಾಮಗಾರಿ ನಡೆದಿಲ್ಲ. ನಿಗಮದ ಶಾಖಾ ಕಚೇರಿ ರಾಣೆಬೆನ್ನೂರಿನಲ್ಲಿದ್ದು, ಅದಕ್ಕೂ ಬೀಗ ಜಡಿಯಲಾಗಿದೆ. ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಕುರಿತು ಸಮಗ್ರ ತನಿಖೆಗೆ ಜಿಲ್ಲಾಧಿಕಾರಿಗಳು ಸಮಿತಿ ರಚಿಸಬೇಕು ಎಂದು ಜಗದೀಶ ಪೂಜಾರ ಆಗ್ರಹಿಸಿದರು.
ತಾಪಂ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಾಗಿನೆಲೆಯಲ್ಲಿ ನೀರಾವರಿ ನಿಗಮದಿಂದ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಇದು ತಾಪಂ ಇಒಗೂ ತಿಳಿದಿಲ್ಲ. ಮಾಹಿತಿ ಕೇಳೋಣ ಎಂದರೆ ತಾಪಂ ಸಭೆಗೆ ಒಮ್ಮೆಯೂ ಇಂಜಿನಿಯರ್ ಬಂದಿಲ್ಲ ಎಂದು ಆರೋಪಿಸಿದರು.
ಸಾರಿಗೆ ಅಧಿಕಾರಿಗಳದ್ದೆ ಕಾರುಬಾರು: ಶಾಂತಪ್ಪ ದೊಡ್ಡಮನಿ ಮಾತನಾಡಿ, ತಾಲೂಕಿನ ಗುಡ್ಡದಮಲ್ಲಾಪುರಕ್ಕೆ ಐದು ವರ್ಷಗಳಿಂದ ಓಡಾಡುತ್ತಿದ್ದ ವಸತಿ ಬಸ್ ಅನ್ನು ಬಂದ್ ಮಾಡಲಾಗಿದೆ. ತಾಲೂಕಿನ ಕೊನೆಯ ಗ್ರಾಮಕ್ಕೆ ತೆರಳಲು ಗ್ರಾಮಸ್ಥರಿಗೆ ಬಸ್ ಇಲ್ಲದಂತಾಗಿದೆ. ಸಾರಿಗೆ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಕೂಡಲೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರು ವಾಹನ ಸಂಚಾರ ತಡೆಯಲು ನಿರ್ಧರಿಸಿದ್ದಾರೆ ಎಂದರು. ಸಭೆಗೆ ಸಾರಿಗೆ ವ್ಯವಸ್ಥಾಪಕರು ಗೈರಾಗಿದ್ದರು. ಬೇರೊಬ್ಬ ಅಧಿಕಾರಿ ಕಳುಹಿಸಿದ್ದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಭುಗೌಡ್ರ ಪಾಟೀಲ ಮಾತನಾಡಿ, ತಾಲೂಕಿನಲ್ಲಿ 700 ಹೆಕ್ಟೇರ್ನಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಕೃಷಿ ಕೆಲಸಕ್ಕೆ ಕೂಲಿ ಕಾರ್ವಿುಕರು ಹಾಗೂ ನಿರ್ವಹಣೆ ವೆಚ್ಚ ತಗ್ಗಿಸಲು ಉದ್ಯೋಗ ಖಾತ್ರಿಯಡಿ ಇದನ್ನು ಸೇರ್ಪಡೆ ಮಾಡಬೇಕು. ಹಿಂದಿನ ಸಭೆಯಲ್ಲಿ ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಫೆಬ್ರವರಿಯೊಳಗೆ ಸೇರ್ಪಡೆ ಮಾಡುವಂತೆ ಸಿಇಒ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಬಿ.ಎ. ಕೊಪ್ಪದ, ತಾಲೂಕಿನ ಶುಂಠಿ ಬೆಳೆಯ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ. ಜಯಕುಮಾರ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಯಲ್ಲನಗೌಡ್ರ ಕರೇಗೌಡ್ರ, ಮಹೇಶಗೌಡ್ರ ಪಾಟೀಲ ಇತರರಿದ್ದರು.
ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ಮಲ್ಲೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ವಿದ್ಯಾರ್ಥಿ ಪತ್ರ ಬರೆದಿರುವ ಕುರಿತು ‘ವಿಜಯವಾಣಿ’ಯಲ್ಲಿ ಜ. 21ರಂದು ವರದಿ ಪ್ರಕಟವಾಗಿದೆ. ಗೂಡಂಗಡಿ ಹಾಗೂ ಕೆಲ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ತಿಳಿಸಿದ್ದಾನೆ. ಇದನ್ನು ತಡೆಗಟ್ಟಿ ಎಂದು ಜನಪ್ರತಿನಿಧಿಗಳು ಒತ್ತಾಯಿಸಿದರೆ ಅಧಿಕಾರಿಗಳು ಅರ್ಜಿ ಕೊಡಿ ಎನ್ನುತ್ತೀರಿ ಹೀಗಾದರೆ ಹೇಗೆ? ಎಂದು ಅಬಕಾರಿ ನಿರೀಕ್ಷಕರ ವಿರುದ್ಧ ಹರಿಹಾಯ್ದರು.
ಅಬಕಾರಿ ನಿರೀಕ್ಷಕ ರಾಮು ಅರೆನ್ನನವರ ಪ್ರತಿಕ್ರಿಯಿಸಿ, ಬಾಲಕನ ಪತ್ರಕ್ಕೆ ಸ್ಪಂದಿಸಿ ಮಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಗುಪ್ತವಾಗಿ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.