ಗುಂಡ್ಲುಪೇಟೆ: ಬಂಡೀಪುರ ಮಾರ್ಗವಾಗಿ ಸಾಗುತ್ತಿದ್ದ ಲಾರಿಯ ಬ್ರೇಕ್ ವಿಫಲವಾಗಿ ಆದ ಪರಿಣಾಮ ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದಿರುವ ಘಟನೆ ಸೋಮವಾರ ನಡೆದಿದೆ.
ತಮಿಳುನಾಡಿನ ಗೂಡಲೂರಿನಿಂದ ಕಬ್ಬಿಣದ ವಸ್ತುಗಳನ್ನು ತುಂಬಿಸಿಕೊಂಡು ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿದ್ದರಿಂದ ಬಂಡೀಪುರ ಮೇಲುಕಾಮನಹಳ್ಳಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಇಳಿಜಾರಿನಲ್ಲಿ ವೇಗವಾಗಿ ಸಾಗಿ ರಸ್ತೆಬದಿಗೆ ನುಗ್ಗಿ ಮರಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ನಿಂತಿದೆ. ಘಟನೆಯಲ್ಲಿ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಹಾಗೂ ಕ್ಲೀನರ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಚಾಲಕರು ಹಾಗೂ ಕ್ಲೀನಲ್‌ಗಳು ಇಬ್ಬರನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದರು. ಸ್ಥಳಕ್ಕೆ ತೆರಳಿದ ಪೊಲೀಸರು ಇಬ್ಬರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಮೊಬೈಲ್‌ನಲ್ಲಿ ಸೆರೆಯಾದ ಅಪಘಾತ: ಎದೆ ಝೆಲ್ ಎನ್ನಿಸುವ ಅಪಘಾತದ ದೃಶ್ಯವನ್ನು ಅದರ ಹಿಂದಿನಿಂದ ಸಾಗುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.