ಮೈಸೂರು ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿ ಕಿರಿಯ ಪುತ್ರನಿಗೆ ಚಾಮುಂಡಿ ಬೆಟ್ಟದಲ್ಲಿ ಬುಧವಾರ ತೊಟ್ಟಿಲು ಶಾಸ್ತ್ರ ನೆರವೇರಿತು.
ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ತೊಟ್ಟಿಲು ಶಾಸ್ತ್ರ ಹಾಗೂ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ದೇವಿಗೆ ಪೂಜಾವಿಧಿ ಮುಗಿದ ನಂತರ ಚಾಮುಂಡಿಬೆಟ್ಟದ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಶಾಸ್ತ್ರ ನೆರವೇರಿಸಲಾಯಿತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೊದಲ ಪುತ್ರ ಆದ್ಯವೀರ, ದೇವಸ್ಥಾನದ ಪ್ರಧಾನ ಆರ್ಚಕ ಶಶಿಶೇಖರ ದೀಕ್ಷಿತ್ ಇತರರು ಇದ್ದರು.
ಎರಡು ತಿಂಗಳ ಹಿಂದೆ ಮೈಸೂರು ದಸರಾ ಸಂದರ್ಭದಲ್ಲಿ ಯದುವೀರ್ ಅವರು ಕಂಕಣಧಾರಿಯಾಗಿದ್ದ ವೇಳೆ ತ್ರಿಷಿಕಾ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದರು.