ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರತಿ ವರ್ಷದಂತೆ ತೊಟ್ಟಿಲು ಹೋಳಿ ಆಟ ಆಡುವ ಮೂಲಕ ಪುರಜನರು ರಾಜಬೀದಿಗಳಲ್ಲಿ ಉತ್ಸವ ನಡೆಸಿ ಶ್ರೀಕೃಷ್ಣನನ್ನು ಸ್ಮರಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮುಂಭಾಗದಿಂದ ಬುಧವಾರ ಆರಂಭವಾದ ಶ್ರೀಕೃಷ್ಣನ ವಿಶೇಷ ಉತ್ಸವ ಮೂರ್ತಿಯ ರಥೋತ್ಸವವಕ್ಕೆ ಜೋಡಿ ಕಂಬಗಳಲ್ಲಿ ವಿಶೇಷ ಖಾದ್ಯಗಳ ಸಮೇತ ಕಟ್ಟಿದ ಮಡಕೆಯ ತೊಟ್ಟಿಲಿಗೆ ಯುವಕರು ಕೋಲುಗಳಿಂದು ಬಡಿದು ಹೋಳಿ ಆಟ ಆಡುವ ಮೂಲಕ ಚಾಲನೆ ನೀಡಲಾಯಿತು.
ನಂತರ ಉತ್ಸವ ಪೂರ್ಣಯ್ಯ ಬೀದಿ, ಉತ್ತರಾದಿಮಠ, ಅಂಚೆಕೇರಿ-ಬಂಡಿಕೇರಿ ಬೀದಿ, ಜೋನಿಗರ ಬೀದಿ, ರಾಮಮಂದಿರ, ಲಕ್ಷ್ಮೀ ದೇವಾಲಯ ಮುಂಭಾಗದಲ್ಲಿ ತಡರಾತ್ರಿವರೆಗೂ ಹೋಳಿ ಆಡುವ ಮೂಲಕ ಪಟ್ಟಣದ ಯುವಕರು ಆಚರಣೆಯನ್ನು ನಡೆಸಿ ರಥೋತ್ಸವ ಪೂರ್ಣಗೊಳಿಸಿದರು. ಈ ವೇಳೆ ಪುರಜನರು ಶ್ರೀಕೃಷ್ಣನ ರಥಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ ಜನರಿಗೆ ಪ್ರಸಾದ ಅರ್ಪಿಸಿದರು.