ಮುಂಡಗೋಡ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡು ಕಳೆದ ವಾರವಷ್ಟೇ ಉದ್ಗಾಟನೆಗೊಂಡಿದ್ದ ಕಾತೂರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಕೆಲವಡೆ ಬಿರುಕು ಬಿಟ್ಟಿರುವುದು ಕಂಡು ಬಂದಿದೆ.
ಕಟ್ಟಡದ ತಳಪಾಯ ಸೇರಿದಂತೆ ಗೋಡೆಯ ಕೆಲವೆಡೆ ಬಿರುಕು ಬಿಟ್ಟಿರುವುದು ಕಂಡು ಬಂದಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂಬುದು ಗ್ರಾಮಸ್ಥರ ವಾದವಾಗಿದೆ.
ಗ್ರಾಮ ಪಂಚಾಯಿತಿಯ ಕಟ್ಟಡ ತೀರಾ ಹಳೆಯದಾಗಿದ್ದ ಕಾರಣ ನೂತನ ಪಂಚಾಯಿತಿ ಕಟ್ಟಡ ನಿರ್ಮಿಸಲು ಪಂಚಾಯಿತಿಯವರು ತಿರ್ಮಾನಿಸಿ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆದುಕೊಂಡು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 28.60 ಲಕ್ಷರೂ. ಹಾಗೂ ಹದಿನೈದಣೇ ಹಣಕಾಸು ಯೋಜನೆಯಡಿ 1.40ಲಕ್ಷ ರೂ. ಅನುದಾನದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.
ಮೂವತ್ತುಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ಪಾಯದಲ್ಲಿ ಬಿರುಕು ಬಿಟ್ಟಿರುವುದು ಕಾಮಗಾರಿಯ ‘ಉತ್ಕೃಷ್ಟತೆ’ಗೆ ಸಾಕ್ಷಿಯಾಗಿದೆ.
ಅಪಾಯ ಕಟ್ಟಿಟ್ಟಬುತ್ತಿ: ಕಟ್ಟಡದ ಮೇಲ್ಭಾಗದಲ್ಲೆಲ್ಲೋ ಅಥವಾ ಪ್ಲಾಸ್ಟರ್‌ನಲ್ಲೋ ಬಿರುಕು ಬಿಟ್ಟಿದ್ದರೆ ರಿಪೇರಿ ಮಾಡಬಹುದಿತ್ತೇನೆ ಆದರೆ ಪಾಯದಲ್ಲಿಯೇ ಬಿರುಕು ಕಾಣಿಸಿಕೊಂಡಿರುವುದರಿಂದ ನಿರಂತರವಾಗಿ ಮಳೆ ಸುರಿದರೆ ಕಟ್ಟಡದ ಪಾಯದಲ್ಲಿ ನೀರಿ ನುಗ್ಗಿ ಕುಸಿಯುವ ಸಾದ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂಬುದು ಸಾರ್ವಜನಿಕರ ವಾದ.
30 ಲಕ್ಷ ರೂ. ವೆಚ್ಚದಲ್ಲಿ ಪಂಚಾಯಿತಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಅದನ್ನು ಸರಿಪಡಿಸಲು ಕ್ರಮ ವಹಿಸಲಾಗುವುದು.ಮಲ್ಲಪ್ಪ ವಾರದ.ಪಿಡಿಒ.ಕಾತೂರ