ಮಡಿಕೇರಿ:
ಕೊಡಗಿನಲ್ಲಿ ದೀಪಾವಳಿ ವೇಳೆ ಸಿಡಿಸುವ ಪಟಾಕಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಿರುವುದು ಕಂಡು ಬರುತ್ತಿದೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಜಾಗೃತಿ ಕಾರ್ಯಕ್ರಮಗಳು ಪರಿಣಾಮ ಬೀರಿದ್ದು, ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಪ್ರಮುಖರು ಕೊಡುವ ಮಾಹಿತಿ ಪ್ರಕಾರ ಸಿಡಿಮದ್ದು ಸುಡುವುದು ಶೇ.40ರಷ್ಟು ಕಡಿಮೆ ಆಗಿದೆ. ಮತ್ತೊಂದು ಕಡೆ ಪಟಾಕಿ ಸುಡುವುದು ನಮ್ಮ ಸಂಪ್ರದಾಯ ಎಂದು ನಂಬಿರುವವರೂ ಇದ್ದಾರೆ.
ದೀಪಾವಳಿ ಮತ್ತು ಹುತ್ತರಿ ಸಂದರ್ಭದಲ್ಲಿ ಪಟಾಕಿ ಇಲ್ಲದಿದ್ದರೆ ಹಬ್ಬಾಚರಣೆಗೆ ಅರ್ಥವೇ ಇಲ್ಲ ಎನ್ನುವ ವಾತಾವರಣದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು.. ಹೀಗೆ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಕಳೆದ 15 ವರ್ಷಗಳಿಂದ ಪಟಾಕಿ ಸಿಡಿಸುವುದರಿಂದ ಆಗುತ್ತಿರುವ ಅಪಾಯಗಳ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಪ್ರಮುಖವಾಗಿ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹೆಚ್ಚಿನ ಪರಿಣಾಮ ಬೀರಿದೆ. ಪ್ರತಿ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಸ್ವೀಕರಿಸುವಂತೆ ನೋಡಿಕೊಳ್ಳಲಾಗುತ್ತದೆ. ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ಬಿಟ್ಟು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವುದಾಗಿ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸುತ್ತಾರೆ.
ಹಣತೆ ಬೆಳಗಿಸೋಣ, ಪಟಾಕಿ ತ್ಯಜಿಸೋಣ, ಪಟಾಕಿ ತ್ಯಜಿಸೋಣ -ಪರಿಸರ ಉಳಿಸೋಣ ಬನ್ನಿ, ಮಾಲಿನ್ಯಕಾರಿ ಪಟಾಕಿ ತ್ಯಜಿಸಿ, ಹಸಿರು ದೀಪಾವಳಿ ಆಚರಿಸಿ, ಹಣತೆ ಹಚ್ಚೋಣ ಬನ್ನಿ, ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಬನ್ನಿ.. ಸೇರಿದಂತೆ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳ ಹತ್ತಿರ ವಿವಿಧ ಘೋಷಣೆಗಳನ್ನು ಕೂಗಿಸಲಾಗುತ್ತದೆ. ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿಗಳು ಈ ಘೋಷಣೆಗಳೊಂದಿಗೆ ಜಾಥಾ ನಡೆಸಿ ಸಾರ್ವಜನಿಕರ ಗಮನವನ್ನೂ ಸೆಳೆಯುತ್ತಾರೆ.
ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ, ವಾಯು, ಜಲ ಮಾಲಿನ್ಯ ಹಾಗೂ ನೆಲ ಮಾಲಿನ್ಯದ ಜತೆಗೆ ಪ್ರಾಣಿ-ಪಕ್ಷಿ ಜೀವ ಸಂಕುಲಗಳು, ಮನುಷ್ಯನ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು, ಪರಿಸರ ವ್ಯವಸ್ಥೆಗೂ ಆಗುವ ಹಾನಿ, ಇದರಿಂದ ಉಂಟಾಗಬಹುದಾದ ದೀರ್ಘಕಾಲಿನ ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ. ಹಸಿರು ಪಟಾಕಿಗಳ ಬಳಕೆ. ಈ ಪಟಾಕಿ ಸಿಡಿಸುವುದಕ್ಕೆ ನಿಗದಿಯಾಗಿರುವ ಸಮಯ ಮತ್ತಿತರ ವಿಷಯಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಹಣತೆ ಹಚ್ಚಿ ದೀಪಾವಳಿ ಆಚರಿಸುವುದಕ್ಕೆ ಒತ್ತು ಕೊಡುವಂತೆ ಮಕ್ಕಳ ಗಮನ ಸೆಳೆಯಲು ಆದ್ಯತೆ ನೀಡಲಾಗುತ್ತದೆ.
ಜಾಗೃತಿ ಕಾರ್ಯಕ್ರಮಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿರುವುದರಿAದಲೇ ಇಷ್ಟರ ಮಟ್ಟಿಗೆ ಪರಿಣಾಮ ಬೀರಲು ಸಾಧ್ಯವಾಗಿದೆ ಎನ್ನುವುದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಪ್ರಮುಖರ ಅಭಿಪ್ರಾಯ. ಈ ಕಾರ್ಯಕ್ರಮಗಳು ಮಕ್ಕಳ ಮನಸ್ಸಿನ ಮೇಲೆ ಮಾತ್ರ ಪರಿಣಾಮ ಉಂಟುಮಾಡುವುದಿಲ್ಲ. ಅವರ ಮೂಲಕ ಪೋಷಕರು, ಅಕ್ಕಪಕ್ಕದ ಮನೆಯವರು, ಅವರ ಗೆಳೆಯರಿಗೂ ವಿಷಯ ಹರಡುತ್ತದೆ. ಹಾಗಾಗಿಯೇ ಜಾಗೃತಿ ಕಾರ್ಯಕ್ರಮಗಳ ಪರಿಣಾಮ ನಿಧಾನಗತಿಯಲ್ಲಿ ಕಂಡುಬAದರೂ ಭವಿಷ್ಯದಲ್ಲಿ ಸಕರಾತ್ಮಕ ಗುರಿ ತಲುಪಲು ಸಾಧ್ಯವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಲಾಗುತ್ತಿದೆ.
ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಪಟಾಕಿ ಸಿಡಿತದಿಂದ ಆಗುವ ಗಾಯ ಸೇರಿದಂತೆ ಇತರ ಅವಘಡಗಳು ಕೊಡಗಿನಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಇದೆ. ಪಟಾಕಿ ಬಳಕೆಯಲ್ಲಿನ ಪ್ರಮಾಣ ಕಡಿಮೆ ಆಗಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ತಮಗೆ ವ್ಯಾಪಾರ ಕಡಿಮೆ ಆಗುತ್ತಿದೆ ಎಂದು ಪಟಾಕಿ ವ್ಯಾಪಾರಿಗಳೂ ಹೇಳುತ್ತಿದ್ದಾರೆ. ಮೊದಲೆಲ್ಲಾ ಮಾರಾಟಕ್ಕೆ ತರುತ್ತಿದ್ದ ಪಟಾಕಿಗಳು ಸಂಪೂರ್ಣ ಖರ್ಚಾಗುತ್ತಿದ್ದವು. ಆದರೆ ಈಗ ತುಂಬಾ ಪಟಾಕಿಗಳು ಉಳಿಯುತ್ತಿವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಮಾಡಲು ಯೋಚಿಸಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿಗಳು.
ಕೊಡಗಿನಲ್ಲಿ ಕಳೆದ 15 ವರ್ಷಗಳಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಯ ಮಹತ್ವದ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಪಟಾಕಿಗಳನ್ನು ಸಿಡಿಸುವ ಪ್ರಮಾಣ ಕ್ಷೀಣಿಸುತ್ತಿರುವುದು ಕಂಡುಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಪರಿಸರ ಜಾಗೃತಿ ಆಂದೋಲನದ ಯಶಸ್ವಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಪರಿಸರ ಸಂಘಟಕ ಟಿ.ಜಿ. ಪ್ರೇಮಕುಮಾರ್ ಮತ್ತು ತಂಡದವರು, ಪರಿಸರ ಅಧಿಕಾರಿಗಳು, ಸ್ಕೌಟ್ಸ್, ಗೈಡ್ಸ್ ಸ್ವಯಂ ಸೇವಕರ ಸೇವಾ ಕಾರ್ಯ ಪ್ರಶಂಸನೀಯ.
ಕೆ.ಟಿ. ಬೇಬಿ ಮ್ಯಾಥ್ಯೂ, ಪ್ರಧಾನ ಆಯುಕ್ತ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ
ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ, ವಾಯು ಮತ್ತು ಜಲ ಮಾಲಿನ್ಯ ಹಾಗೂ ನೆಲ ಮಾಲಿನ್ಯದ ಜತೆಗೆ ಪ್ರಾಣಿ-ಪಕ್ಷಿ ಜೀವ ಸಂಕುಲಗಳು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಪರಿಸರ ವ್ಯವಸ್ಥೆಗೂ ತೀವ್ರ ಧಕ್ಕೆಯುಂಟಾಗುತ್ತದೆ. ಆದ್ದರಿಂದ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ತ್ಯಜಿಸಿ ಮಾಲಿನ್ಯ ತಡೆಗಟ್ಟುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಜಾಗೃತಿ ಕಾರ್ಯಕ್ರಮಗಳಿಂದ ಕೊಡಗಿನಲ್ಲಿ ಶೇ.40 ರಷ್ಟು ಪ್ರಮಾಣದಲ್ಲಿ ಪಟಾಕಿ ಬಳಕೆ ಕಡಿಮೆ ಆಗಿದೆ.
ಟಿ.ಜಿ. ಪ್ರೇಮಕುಮಾರ್, ಸಂಚಾಲಕ, ಜಿಲ್ಲಾ ಪರಿಸರ ಜಾಗೃತಿ ಆಂದೋಲನ
ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ವೃದ್ಧಾಶ್ರಮ ಸೇರಿದಂತೆ ನಿಶ್ಯಬ್ಧವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ ಸುತ್ತ ಮುತ್ತ ದಿನದ ಯಾವುದೇ ಸಮಯದಲ್ಲಿ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಯಾವುದೇ ಕ್ರಮಗಳನ್ನು ಉಲ್ಲಂಘಿಸಿರುವುದು ಕಂಡುಬAದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆಯನುಸಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಟ್ಟು ಹಬ್ಬವನ್ನು ಹಸಿರು ದೀಪಾವಳಿ -ಸ್ವಸ್ಥ ದೀಪಾವಳಿ ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ