ಕೊಳ್ಳೇಗಾಲ: ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಹೊರವಲಯದಲ್ಲಿ ಹಾದು ಹೋಗಿರುವ ಎನ್.ಎಚ್-948 ರಸ್ತೆ ಸೇತುವೆ ನಿರ್ಮಾಣಗೊಂಡು ಸಂಚಾರಕ್ಕೆ ಅವಕಾಶ ನೀಡಿ ಕೆಲವೇ ತಿಂಗಳಲ್ಲಿ ಸೇತುವೆ ಮೇಲಿನ ರಸ್ತೆಯ ಅಲ್ಲಲ್ಲಿ ಕಾಂಕ್ರೀಟ್ ಬಿರುಕು ಬಿಟ್ಟಿರುವ ಪರಿಣಾಮ ದುರಸ್ತಿ ಕೆಲಸ ಮಾಡಲಾಗುತ್ತಿದೆ.
ಕೊಳ್ಳೇಗಾಲ-ಬೆಂಗಳೂರು ಕಡೆಗೆ ತೆರಳುವ ಹೆದ್ದಾರಿ ರಸ್ತೆ ಇದಾಗಿದ್ದು. ಸತ್ತೇಗಾಲ ಹ್ಯಾಂಡ್‌ಪೊಸ್ಟ್ ಸಮೀಪ ಎನ್.ಎಚ್ 948 ರಸ್ತೆ ಹಾದು ಹೋಗಿದೆ. ಈ ನಡುವೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಳೆದ ನಾಲ್ಕೈದು ತಿಂಗಳಷ್ಟೇ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಇದರಿಂದಾಗಿ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಗ್ರಾಮದ ಮೇಲೆ ಹಾದು ಹೋಗುವ ಹಳೇ ಹೆದ್ದಾರಿ ರಸ್ತೆಯಲ್ಲಿ ವಾಹನ ಓಡಾಟ ತಗ್ಗಿತ್ತು. ಬಹುಪಾಲು ವಾಹನಗಳು ಹೊಸ ಸೇತುವೆ ಮೇಲೆ ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಸೇತುವೆ ಮಧ್ಯದಲ್ಲಿರುವ ಕಬ್ಬಿಣದ ರಾಡಿನ ಮಧ್ಯ ಭಾಗದಲ್ಲಿರುವ ಸಿಮೆಂಟ್ ಕಿತ್ತು ಹೋಗಿ ಸೇತುವೆ ಕೆಳಗೆ ನೀರು ಹರಿಯುತ್ತಿರುವ ದೃಶ್ಯ ಕಾಣುತ್ತಿತ್ತು. ಈ ಬಗ್ಗೆ ಎಚ್ಚೆತ್ತ ಸಂಬಂಧಪಟ್ಟ ಇಂಜಿನಿಯರ್‌ಗಳು ದುರಸ್ತಿ ಕೆಲಸಕ್ಕೆ ಮುಂದಾಗಿದ್ದಾರೆ. ಪರಿಣಾಮ ನೂತನ ಸೇತುವೆ ಮೇಲೆ ಸಂಚಾರ ತಡೆ ಹಿಡಿಯಲಾಗಿದೆ.
ಸೇತುವೆ ಮೇಲೆ ಸಿಲುಕಿದ ಬಸ್‌ಗಳು: ಎನ್.ಎಚ್ 948 ರಸ್ತೆಯ ನೂತನ ಸೇತುವೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸಂಚಾರ ತಡೆಯಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ-ಬೆಂಗಳೂರು ಮಾರ್ಗ ಮತ್ತು ಕೊಳ್ಳೇಗಾಲ-ಬೆಳಕವಾಡಿ ಮಾರ್ಗ ತೆರಳುವ ಎಲ್ಲ ವಾಹನಗಳು ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನ ಹಳೇ ಸೇತುವೆ (ಬೆಂಗಳೂರು ಮಾರ್ಗದ ಸೇತುವೆ) ಮೇಲೆ ತೆರಳುತ್ತಿವೆ. ಈ ಸೇತುವೆ ಕಿರಿದಾಗಿರುವ ಕಾರಣ ಆಗಾಗ್ಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅಂತೆಯೆ, ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್‌ಗಳು ಏಕ ಕಾಲದಲ್ಲಿ ಸೇತುವೆ ಮೇಲೆ ಸಂಚರಿಸಿ ಸೇತುವೆ ಮಧ್ಯೆ ಸಿಲುಕಿದ ಪರಿಣಾಮ ವಾಹನದಟ್ಟನೆ ಏರ್ಪಟಿತ್ತು. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಸಂಚಾರಕ್ಕೆ ತೊಂದರೆ ಆಯಿತು.