ಜಿಲ್ಲೆ

ನನ್ನ ಪಾಡಿಗೆ ಇರಲಿ ಬಿಡಿ ವಿರೋಧಿಗಳಿಗೆ ಸಿಪಿವೈ ಖಡಕ್ ಎಚ್ಚರಿಕೆ

ಗಂಗಾಧರ ಬಿ ವಿ

ರಾಮನಗರ: ರಾಜಕೀಯವಾಗಿ ಮುಗಿಸಬೇಕು ಎನ್ನುವ ನನ್ನ ವಿರೋಧಿಗಳ ಪ್ರಯತ್ನ ಎಂದಿಗೂ ಫಲ ನೀಡುವುದಿಲ್ಲ. ನನಗೆ ತೊಂದರೆ ಕೊಟ್ಟರೆ ಸುಮ್ಮನೆ ಕೂರುವ ಜಾಯಮಾನವೂ ನನ್ನದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಜಾನಪದ ಲೋಕದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಜಕೀಯವಾಗಿ ಎಲ್ಲವನ್ನೂ ನೋಡಿದ್ದೇನೆ. ಸರ್ಕಾರ ಬೀಳಿಸುವ, ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ತಂತ್ರಗಾರಿಕೆಯೂ ಗೊತ್ತು. ಅದೇ ರೀತಿ ರಾಜಕೀಯವಾಗಿ ಯಾರೂ ಹಾಕದ ಪಟ್ಟುಗಳನ್ನು ಹಾಕುವ ಕಲೆಯೂ ನನ್ನಲ್ಲಿ ಇದೆ. ಎಲ್ಲವನ್ನೂ ಕ್ರಿಯೇಟ್ ಮಾಡುವ ಶಕ್ತಿಯೂ ನನಗೆ ಇದೆ. ಆದರೆ ಇದ್ಯಾವುದೂ ಬೇಡ ಎನ್ನುವ ಕಾರಣಕ್ಕೆ ಸುಮ್ಮನೆ ಇದ್ದೇನೆ ಹಾಗೆಂದ ಮಾತ್ರಕ್ಕೆ ನನ್ನನ್ನು ರಾಜಕೀಯವಾಗಿ ಮುಗಿಸಬಹುದು ಎನ್ನುವ ಕನಸು ಕಂಡಿದ್ದರೆ ಅದು ಖಂಡಿತಾ ಆಗದು. ನನಗೂ ನನ್ನ ಎದುರಾಳಿಗಳಿಗೆ ತಿರುಗೇಟು ನೀಡುವ ಶಕ್ತಿ ಇದೆ ಎಂದು ಯೋಗೇಶ್ವರ್ ಎಚ್ಚರಿಸಿದರು.

ಪಕ್ಷದ ತೀರ್ಮಾನಕ್ಕೆ ಬದ್ಧ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎನ್ನುವ ಆಸೆ ಇದೆ. ಹಾಗೆಂದ ಮಾತ್ರಕ್ಕೆ ನನ್ನ ಪಕ್ಷದ ತೀರ್ಮಾನ ವಿರುದ್ಧ ನಾನು ಹೋಗುವುದಿಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ನಮ್ಮ ಎನ್ಡಿಎ ಮೈತ್ರಿ ಕೂಟದ ನಾಯಕರು ತೀರ್ಮಾನ ಮಾಡುತ್ತಾರೆ. ಒಂದು ವೇಳೆ ನನಗೆ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಎಂದರೂ ನಾನು ಸ್ಪರ್ಧೆ ಮಾಡಲು ಸಿದ್ದನಿದ್ದೇನೆ. ನಮಗೆ ಕ್ಷೇತ್ರದಲ್ಲಿ ಗೆಲ್ಲುವುದಷ್ಟೇ ಮುಖ್ಯ ಎಂದರು.

ಬೇರೆ ಕ್ಷೇತ್ರದ ಆಯ್ಕೆಯೂ ಇದೆ

ಚನ್ನಪಟ್ಟಣ ನನ್ನ ಜನ್ಮ ಭೂಮಿ, ಕರ್ಮ ಭೂಮಿ ಇಲ್ಲಿ ನನಗೆ ಈ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧೆ ಮಾಡಲು ಅವಕಾಶ ಇಲ್ಲ. ಒಂದು ವೇಳೆ ನನ್ನನ್ನು ಕ್ಷೇತ್ರವನ್ನು ನನ್ನಿಂದ ಕ್ಷೇತ್ರವನ್ನು ಕಸಿದುಕೊಳ್ಳುವ ಪ್ರಯತ್ನ ನಡೆದರೆ ಅನಿವಾರ್ಯವಾಗಿ ನಾನು ಪಕ್ಕದ ಮಾಗಡಿ, ರಾಮನಗರ, ಕನಕಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲೇಬೇಕಾಗುತ್ತದೆ ಎನ್ನುವ ಮೂಲಕ ಅಚ್ಚರಿ ಹೇಳಿಕೆಯನ್ನು ನೀಡಿದರು.

ಸಂಬಂಧ ಚೆನ್ನಾಗಿದೆ

ನನ್ನ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ಅವರೂ ಸಹ ನನಗೆ ಟಿಕೆಟ್ ಕೊಡಬೇಕು ಎನ್ನುವ ಇಂಗಿತವನ್ನು ಪಕ್ಷದ ವರಿಷ್ಠರ ಮುಂದೆ ಇಟ್ಟಿದ್ದಾರೆ. ನಾವು ಹಲವಾರು ವಿಷಯಗಳ ಬಗ್ಗೆ ಪರಸ್ಪರ ಚರ್ಚೆ ಮಾಡುತ್ತೇವೆ. ಇಬ್ಬರ ಸಂಬಂಧ ಸರಿ ಇಲ್ಲ ಎನ್ನುವುದು ಸುಳ್ಳು ಮಾಹಿತಿ ಎಂದು ಯೋಗೇಶ್ವರ್ ಸಮರ್ಥಿಸಿಕೊಂಡರು.