ವಿರಾಜಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಮುಷ್ಕರಕ್ಕೆ ಸಿಪಿಐಎಂ ಪಕ್ಷ ಕೊಡಗು ಜಿಲ್ಲೆ ಬೆಂಬಲ ಸೂಚಿಸಿದೆ.
ಸಿಪಿಐಎಂ ಕೊಡಗು ಜಿಲ್ಲಾ ಘಟಕ ವತಿಯಿಂದ ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯ ಕಚೇರಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜು.9ರಂದು ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಸುದ್ದಿಗೋಷ್ಠಿ ನಡೆಸಿ ಬೆಂಬಲ ಸೂಚಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ರಮೇಶ್ ಎಚ್.ಬಿ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಅಸಂಘಟಿತ ಕಾರ್ಮಿಕರು ದುಡಿಯುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ 8 ಗಂಟೆ ದುಡಿಯುವ ಸಮಯದಿಂದ 12 ಗಂಟೆವರೆಗೆ ನಿಗದಿಗೊಳಿಸಿರುವುದು ಕಾರ್ಮಿಕರಿಗೆ ಭಾರಿ ಹೊಡೆತ ಬಿದ್ದಿದೆ. ಕಾರ್ಮಿಕರ ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಒಟ್ಟು 29 ಕಾನೂನುಗಳನ್ನು ಮಾರ್ಪಾಡು ಮಾಡಿ ನಾಲ್ಕು ಭಾಗಗಳಾಗಿ ವಿಂಗಡಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದೇಶದಲ್ಲೆಡೆ ಒಂದು ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರವನ್ನು ಜು.9 ರಂದು ಹಮ್ಮಿಕೊಳ್ಳಲಾಗಿದೆ. ಮುಷ್ಕರಕ್ಕೆ ಜಿಲ್ಲಾ ಸಿಪಿಐಎಂ ಪಕ್ಷ ಸಂಪೂರ್ಣ ಬೆಂಬೆಲ ನೀಡಲಿದೆ. ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ವಿರಾಜಪೇಟೆ ನಗರದಲ್ಲಿ ನಡೆಯಲಿರುವ ಕಾರ್ಮಿಕರ ಮುಷ್ಕರಕ್ಕೆ ವಿವಿಧ ಸ್ತರದಲ್ಲಿ ದುಡಿಯುವ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಪಿ.ಆರ್.ಭರತ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರೀಮಂತ ಬಂಡವಾಳಶಾಹಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಯೋಜನೆಗಳನ್ನು ಅನುಸರಿಸಿಕೊಂಡು ಬರುತ್ತಿದೆ. ಸರ್ಕಾರಗಳು ಕಾರ್ಮಿಕರ ಪರವಾದ ಯೋಜನೆಗಳು ಮತ್ತು ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಂಡು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ಮಾಡುವ ಉದ್ದೇಶದಿಂದ ಕಾನೂನು ರೂಪಿಸುತ್ತಾ ಬಂದಿದೆ. ಇದನ್ನ ಖಂಡಿಸಿ ಕರೆ ನೀಡಿರುವ ಮುಷ್ಕರಕ್ಕೆ ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಕೊಡಗು ಜಿಲ್ಲಾ ಸಮಿತಿಯ ಸದಸ್ಯರಾದ ಎ.ಸಿ. ಸಾಬು, ಎನ್.ಡಿ. ಕುಟ್ಟಪ್ಪ ಮತ್ತು ಪದ್ಮಿನಿ ಶ್ರೀಧರ್ ಇದ್ದರು.