ಮಂಡ್ಯ: ಮಹಾತ್ಮಗಾಂಧೀಜಿ ಅವರ ಹುತಾತ್ಮರಾದ ದಿನವಾದ ಜ.30ರಂದು ಶ್ರೀರಂಗಪಟ್ಟಣದಲ್ಲಿ ಸೌಹಾರ್ದತೆಗಾಗಿ ಕೈಜೋಡಿಸೋಣ ಘೋಷಣೆಯೊಂದಿಗೆ ಸೌಹಾರ್ದ ಪರಂಪರೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.
ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೌಹಾರ್ದ ಮಂಡ್ಯ ಸಂಘಟನೆ ಈ ಅಭಿಯಾನ ಆಯೋಜಿಸಿದೆ. ಅದರಂತೆ ಅಂದು ಬೆಳಗ್ಗೆ 11ಕ್ಕೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮೀಜಿ ದೇವಾಲಯ ಆವರಣದಿಂದ ಆರಂಭಗೊಂಡು ಜಾಮಿಯಾ ಮಸೀದಿವರೆಗೆ ಮಾನವ ಸರಪಳಿ ರಚಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಶಾಂತಿ, ಸೌಹಾರ್ದತೆಯಿಂದ ಜನರು ಬದುಕು ಸಾಗಿಸುತ್ತಿರುವ ಶ್ರೀರಂಗಪಟ್ಟಣದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಜನರ ನಡುವಿನ ಸೌಹಾರ್ಧತೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಟಿಪ್ಪು ವಿರುದ್ಧ ಹಿಂದು ಸಮಾಜವನ್ನು ಎತ್ತಿಕಟ್ಟುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಸೌಹಾರ್ದತೆಯ ಬಲೆಯನ್ನು ಹರಿದು ಹಾಕುವ ಷಡ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಪ್ರಾಂತ ರೈತಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜನವಾದಿ ಸಂಘಟನೆಯ ಲತಾ, ಸಿಐಟಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಉಪನ್ಯಾಸಕ ಸಲೀಂ, ಪಿ.ಹನುಮೇಶ್ ಹಾಜರಿದ್ದರು.