ಮೈಸೂರು: ಮುಡಾ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿಗಳ ಆಯೋಗ ರಚನೆ ಮಾಡಿದ ರೀತಿಯಲ್ಲಿಯೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ಆಯೋಗ ರಚಿಸಬೇಕು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಆಗ್ರಹಿಸಿದರು.
ಮುಡಾ ಹಗರಣದ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ತನಿಖೆಯ ಕುರಿತು ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿಶ್ವಾಸ ತೋರದೆ ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವುದು ಸರಿಯಲ್ಲ. ಹಾಗಿದ್ದಲ್ಲಿ ಸಿಬಿಐ ವಿಶ್ವಾಸಾರ್ಹವೇ? ಸಿಬಿಐಯನ್ನು ಕೇಂದ್ರ ಸರ್ಕಾರ ವಿರೋಧಿಗಳನ್ನು ಮಣಿಸಲು ಬಳಕೆ ಮಾಡುತ್ತಿದೆ. ಹಾಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವುದು ಸರಿ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಪ್ರವಾಹ ಎದುರಾಗಿದ್ದು, ಹಲವಾರು ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರಾಜಕೀಯ ಕಾರಣಕೋಸ್ಕರ ಬಿಜೆಪಿ ಮುಡಾ ಹಗರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವುದು ಸರಿಯಲ್ಲ. ಈ ಪಾದಯಾತ್ರೆಗೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು. ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಪ್ರಯತ್ನ ಖಂಡನೀಯ ಎಂದರು.