ಕಲಬುರಗಿ: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಪಿಐ ರಮೇಶ ಮೇಟಿ ಅವರಿಗೆ ಈಗ ಡಿವೈಎಸ್ಪಿ ಹುದ್ದೆಗೆ ಬಡ್ತಿ ಸಿಕ್ಕಿದೆ. ಬಡ್ತಿಗಾಗಿ 8 ವರ್ಷಗಳಿಂದ ಸತತ ಹೋರಾಟ ನಡೆಸಿದವರಿಗೆ ನಿವೃತ್ತಿ ಬಳಿಕ ನ್ಯಾಯ ಸಿಕ್ಕಿದೆ. ಕಲಬುರಗಿ ಕೆಎಟಿ ಪೀಠವು ತ್ವರಿತ ನ್ಯಾಯದಾನ ಮೂಲಕ ನ್ಯಾಯಪೀಠದ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ.
ಮೇಟಿ ಅವರು ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ರೋಜಾ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಳೆದ ಡಿ.31ರಂದು ಸೇವಾ ನಿವೃತ್ತಿ ಹೊಂದಿದ್ದರು. ಇಲಾಖೆಯಲ್ಲಿ ಹಲವು ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತನಿಖೆ ಮಾಡುವ ಮೂಲಕ ಉತ್ತಮ ಹೆಸರು ಮಾಡಿದ್ದರು. ಇಡೀ ಸೇವಾವಧಿಯಲ್ಲಿ ಒಂದೇ ಬಡ್ತಿ ಸಿಕ್ಕಿತ್ತು.
1990ರ ಬ್ಯಾಚ್ನ ಪಿಎಸ್ಐ ಆಗಿದ್ದ ರಮೇಶ ಮೇಟಿ ಅವರಿಗೆ 2001ರಲ್ಲಿ ಸಿಪಿಐ ಹುದ್ದೆಗೆ ಬಡ್ತಿ ಪಡೆದಿದ್ದರು. 2013ರಲ್ಲಿ ಇನ್ಸ್ಪೆಕ್ಟರ್ ಹುದ್ದೆಯಿಂದ ಡಿವೈಎಸ್ಪಿ ಹುದ್ದೆಗೆ ಬಡ್ತಿ ಸಿಗಬೇಕಿತ್ತು. ಆದರೆ ಮೇಲಧಿಕಾರಿಗಳ ಪ್ರಮಾದದಿಂದಾಗಿ ವೇತನ ಬಡ್ತಿ ಕಡಿತಗೊಂಡಿತ್ತು. ಅದನ್ನೇ ನೆಪವಾಗಿಸಿ ಮುಂದಿನ ಹುದ್ದೆಗೆ ಪ್ರಮೋಷನ್ ನೀಡುವುದನ್ನು ಅನಗತ್ಯವಾಗಿ ತಡೆ ಹಿಡಿಯಲಾಗಿತ್ತು.
ಸೇವಾ ಹಿರಿತನ ಆಧರಿಸಿ ನ್ಯಾಯಸಮ್ಮತ ಬಡ್ತಿ ಪಡೆಯಲು ಮೇಟಿ, 2013ರಿಂದ ನಿರಂತರ ಏಳು ವರ್ಷ ಗೃಹ ಇಲಾಖೆಯಲ್ಲಿ ದಾಖಲೆಗಳನ್ನು ಸಲ್ಲಿಸಿ ಲೋಪ ಸರಿಪಡಿಸುವಂತೆ ಹಿರಿಯ ಅಧಿಕಾರಿಗಳ ಮೊರೆ ಹೋದರೂ ಪ್ರಯೋಜನವಾಗಿರಲಿಲ್ಲ.
ಕೊನೇ ಪ್ರಯತ್ನ ಎನ್ನುವಂತೆ ನಿವೃತ್ತಿಗೆ 20 ದಿನ ಮುನ್ನ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಕಲಬುರಗಿ ಪೀಠದಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ತಮಗಿಂತಲೂ ಸೇವೆಯಲ್ಲಿ ಕಿರಿಯರಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಹೀಗಾಗಿ ಬಡ್ತಿ ನೀಡಲು ಆದೇಶಿಸುವ ಮೂಲಕ ಆಗಿರುವ ಅನ್ಯಾಯ ಸರಿಪಡಿಸಲು ಕೋರಿದ್ದರು.
ಕೆಎಟಿ ಪೀಠದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ ಅವರು ತ್ವರಿತಗತಿಯಲ್ಲಿ ಅರ್ಜಿ ವಿಚಾರಣೆ ನಡೆಸಿ 38 ದಿನದಲ್ಲಿ ಪ್ರಕರಣ ಇತ್ಯರ್ಥಪಡಿಸಿ ಮೇಟಿ ಅವರಿಗೆ 2016ರ ಸೆಪ್ಟೆಂಬರ್ 9ರಿಂದ ಡಿವೈಎಸ್ಪಿ ಶ್ರೇಣಿ ವೇತನ ನಿಗದಿಪಡಿಸಿ ಬಡ್ತಿ ಕೊಡಬೇಕು. ಅಲ್ಲದೆ ಎಲ್ಲ ಹಿಂಬಾಕಿ ಸೌಲಭ್ಯ ನೀಡಬೇಕು ಮಹತ್ವದ ತೀರ್ಪು ನೀಡಿದ್ದಾರೆ. ಇದರಿಂದಾಗಿ ರಮೇಶ ಮೇಟಿಯವರಿಗೆ ನಿವೃತ್ತಿ ಬಳಿಕ ನ್ಯಾಯ ಸಿಕ್ಕಂತಾಗಿದೆ. ನಕ್ಸಲ್ ಚಟುವಟಿಕೆ ನಿಗ್ರಹ ಸೇರಿ ಹಲವೆಡೆ ಸೇವೆ ಸಲ್ಲಿಸಿದ್ದರು.
ದೇವರಿದ್ದಾನೆ. ಸತ್ಯ ಎಂದಿಗೂ ಸಾಯುವುದಿಲ್ಲ, ಆದರೆ ತಡವಾಗಿ ಗೊತ್ತಾಗುತ್ತದೆ ಎಂಬುದಕ್ಕೆ ನನ್ನ ಪ್ರಕರಣವೇ ಸಾಕ್ಷಿ. ಆಡಳಿತಾತ್ಮಕ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಿ ತ್ವರಿತ ನ್ಯಾಯದಾನ ಮಾಡಿದ್ದು ಖುಷಿ ತಂದಿದೆ. 2016ರಿಂದಲೇ ಅನ್ವಯಸುವಂತೆ ತೀರ್ಪು ಬಂದಿದೆ. ಇದು ಸರ್ಕಾರಿ ನೌಕರರಿಗೆ ನೈತಿಕ ಬಲ ನೀಡಲಿದೆ.
| ರಮೇಶ ಮೇಟಿ
ನಿವೃತ್ತಿ ನಂತರ ಬಡ್ತಿ ಪಡೆದ ಪೊಲೀಸ್ ಅಧಿಕಾರಿ