ಮಂಗಳೂರು: ಅಡಕೆ ಕ್ಯಾನ್ಸರ್‌ಕಾರಕ ವಿವಾದ ಶಾಶ್ವತ ಪರಿಹಾರಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಸಂಸ್ಥೆ ಮಹತ್ತರ ಯೋಜನೆ ರೂಪಿಸಿದೆ. ಅಡಕೆ ಜೀವಕೋಶಗಳು ಮಾನವ ಜೀವಕೋಶಗಳಿಗೆ ಹಾನಿಯುಂಟುಮಾಡುತ್ತದೆಯೇ ಎಂಬ ದೃಷ್ಠಿಯಲ್ಲಿ ಸಮಗ್ರ ಅಧ್ಯಯನಕ್ಕೆ ಮುಂದಾಗಿದ್ದು, ಸಿಪಿಸಿಆರ್‌ಐ ಮುಖಾಂತರ ಈಬಗ್ಗೆ ಯೋಜನಾ ಪ್ರಸ್ತಾವಣೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಅಡಕೆಯ ಆರೋಗ್ಯ ಪರಿಣಾಮಗಳ ಬಗ್ಗೆ ಕೇಂದ್ರೀಯ ಸಂಶೋಧನಾ ಸಂಸ್ಥೆಯುಲ್ಲಿ ಅಧ್ಯಯನ ನಡೆಸಲು 10 ಕೋಟಿ ರು. ಮೊತ್ತದ ಯೋಜನಾ ಪ್ರಸ್ತಾವಣೆಗೆ ಕೇಂದ್ರ ಸರ್ಕಾರ ಮೌಕಿಕ ಅನುಮತಿ ನೀಡಿದ್ದರೂ, ಇನ್ನಷ್ಟೇ ಅನುದಾನ ಬಿಡುಗಡೆಯಾಗಬೇಕಿದೆ. ಈ ಯೋಜನೆಯಂತೆ ಕಾಸರಗೋಡಿನ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್(ಐಸಿಎಆರ್) ಇದರಡಿ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ನೇತೃತ್ವದಲ್ಲಿ ಮೂರು ವರ್ಷದಲ್ಲಿ ಸಮಗ್ರ ಅಧ್ಯಯನ ನಡೆಯಲಿದೆ. ದೇಶದ ಪ್ರತಿಷ್ಠಿತ ಏಮ್ಸ್‌ನಂತಹ 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ಅಡಕೆ ಬಗ್ಗೆ ವಿಸ್ತೃತ ಅಧ್ಯಯನ ನಡೆಯುವ ಯೋಜನೆಯಿದು. ಈಗಾಗಲೇ ದೇಶದ ಪ್ರತಿಷ್ಠಿತ ವಿವಿಧ ಸಂಶೋಧನಾ ಸಂಸ್ಥೆಗಳು, ಮೆಡಿಕಲ್ ವಿಶ್ವವಿದ್ಯಾಲಯಗಳು, ಆರೋಗ್ಯ ಸಂಸ್ಥೆಗಳು, ಅಡಕೆಗೆ ಪೂರಕವಾದ ಸಂಘಸಂಸ್ಥೆಗಳನ್ನು ಸಿಪಿಸಿಆರ್‌ಐ ಸಂಪರ್ಕಿಸಿ ಎರಡು ಸುತ್ತಿನ ಮಾತುಕತೆ ನಡೆಸಿದೆ. ಸಹಾಯಧನ ಬಿಡುಗಡೆಯಾದ ಕೂಡಲೇ ಸಂಶೋಧನೆಗೆ ಆರಂಭಿಕ ಚಾಲನೆ ದೊರೆಯಲಿದೆ. *ಕೇದ್ರೀಕೃತ ವ್ಯವಸ್ಥೆಯಡಿಯಲ್ಲಿ ಸಂಶೋಧನೆ ವಿಶ್ವ ಆರೋಗ್ಯ ಸಂಸ್ಥೆ ಸಲ್ಲಿಕೆಯಾದ ವರದಿಯಲ್ಲಿ ಗುಟ್ಕಾ, ತಂಬಾಕು ಸಹಿತ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಷರಾ ಬರೆಯಲಾಗಿದೆ. ಇತ್ತೀಚೆಗೆ ಮಂಗಳೂರಿನ ನಿಟ್ಟೆ ಸಂಸೋಧನಾ ಕೇಂದ್ರ ನಿರೂಪಿಸಿದ ಅಧ್ಯಯನದಲ್ಲಿ ಅಡಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವರದಿಯನ್ನೂ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಅಡಕೆಯನ್ನು ಕ್ಯಾನ್ಸರ್‌ಕಾರಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಸಿರುವು, ಭಾರತದಲ್ಲೂ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆಯಲ್ಲಿದೆ. ಹತ್ತು ಹಲವು ಸಂಸೋಧನಾ ವರದಿಗಳು ಅಡಕೆ ಆರೋಗ್ಯಕರ ಎಂಬುದನ್ನು ನಿರೂಪಿಸುವುದರಲ್ಲಿ ಗೊಂದಲವಿದ್ದು, ಇದಕ್ಕಾಗಿ ದೇಶದ ಪ್ರಮುಖ ಆರೋಗ್ಯ ಸಂಶೋಧನಾ ಕೇಂದ್ರಗಳು, ಕೈಗಾರಿಕಾ, ಕೃಷಿ, ತೋಟಗಾರಿಕಾ ಸಂಶೋಧನಾ ಕೇಂದ್ರಗಳ ಕೇದ್ರೀಕೃತ ವ್ಯವಸ್ಥೆಯಡಿಯಲ್ಲಿ ಅಧ್ಯಯನ ನಡೆಸಲು ಯೋಜನಾ ಪ್ರಸ್ತಾವಣೆಯಲ್ಲಿ ಸಿಪಿಸಿಆರ್‌ಐ ನಿರ್ಧರಿಸಿದೆ. --------------- ಅಧ್ಯಯನದ ಪ್ರಮುಖ ಉದ್ದೇಶ ಅಡಕೆ ಆರೋಗ್ಯಕರವೇ, ಅಡಕೆ ಕ್ಯಾನ್ಸರ್ ಕಾರಕವೇ ಎಂಬುವುದನ್ನು ಈ ಸಂಶೋಧನೆ ನಿರೂಪಿಸಲಿದೆ. ಅಡಕೆ ಮೌಲ್ಯವರ್ಧನೆ ಸಂದರ್ಭ ಅಥವಾ ಮೌಲ್ಯವರ್ಧನೆಗೂ ಮುಂಚೆ ಇರುವ ಸಾಧಕ ಭಾದಕಗಳ ಅಧ್ಯಯನ, ಅಡಕೆ ಮೌಲ್ಯವರ್ಧನೆ ವೇಳೆ ಉಂಟಾಗುವ ಪರಿಣಾಮಗಳ ಅಧ್ಯಯನ, ಅಡಕೆ ಹಾಗೂ ಅದರ ಸೇವನೆ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ರೀತಿಯ ಸಂಶೋಧನಾ ಅಧ್ಯಯನ ನಡೆಸುವುದೇ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನ ಪ್ರಮುಖ ಉದ್ದೇಶ. ಇದರ ಜತೆಗೆ ಪ್ರಾಕೃತಿಕ ಬದಲಾವಣೆಯಲ್ಲಿ ಅಡಕೆ ಜೀವಕೋಶಗಳಲ್ಲಿ ಬದಲಾವಣೆಯಾಗಿದೆಯೇ, ಬದಲಾವಣೆಯಾಗಿದ್ದಲ್ಲಿ ಇದರ ಸಾಧಕ ಭಾದಕಗಳ ಬಗ್ಗೆಯೂ ಸಂಶೋಧನಾ ಅಧ್ಯಯನ ನಡೆಯಲಿದೆ. ----------------- ಸಿಪಿಸಿಆರ್‌ಐ ನೇತೃತ್ವದಲ್ಲಿ ಅಡಕೆ ಬಗ್ಗೆ ಅಧ್ಯಯನ ನಡೆಸಲು ಅಗತ್ಯವಿರುವ ಪ್ರಾಜೆಕ್ಟ ಫಂಡ್ ಕೇಂದ್ರ ಸರ್ಕಾರದಿಂದ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇದರಲ್ಲಿ ಅಡಕೆ ಹಾಗೂ ಅದರ ಸೇವನೆ ಕುರಿತೂ ಅಧ್ಯಯನ ನಡೆಯಲಿದೆ. ಈ ಸಂಶೋಧನೆ ಸಂಪೂರ್ಣವಾಗಿ ವೈಜ್ಞಾನಿಕ ಹಾಗೂ ವೈದ್ಯಕೀಯ ಸಂಶೋಧನೆನೆಲೆಯಲ್ಲಿ ನಡೆಯಲಿದೆ. ಈ ಮೂಲಕ ಅಡಕೆಯ ಸಾಧಕ ಭಾದಕಗಳನ್ನು ಸಾಬೀತುಪಡಿಸಲು ಎಲ್ಲ ರೀತಿಯ ಪ್ರಯತ್ನ ನಡೆಯಲಿದೆ. -ಡಾ.ಕೆ.ಬಿ.ಹೆಬ್ಬಾರ್, ನಿರ್ದೇಶಕ