ವಿಟ್ಲ: ವಿಜ್ಞಾನಿಗಳ ಸಂಶೋಧನೆಯ ನಂಬಿಕೆಯ ಆಧಾರದಲ್ಲಿ ಕೃಷಿ ಚಟುವಟಿಕೆಯನ್ನು ನಡೆಸಬೇಕಾಗಿದೆ. ಚಿಕ್ಕಮಂಗಳೂರು, ತೀರ್ಥಹಳ್ಳಿ ಭಾಗದಲ್ಲಿ ಎಲೆಚುಕ್ಕೆ ರೋಗದ ಹಾವಳಿ ಬಹಳಷ್ಠಿದೆ. ರೋಗಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಹತೋಟಿಗೆ ತರುವ ನಿಟ್ಟಿನಲ್ಲಿ ವಿಜ್ಞಾನಿಗಳು ರೈತರಿಗೆ ಮಾರ್ಗದರ್ಶನ ನೀಡಬೇಕಾಗಿದೆ. ಎಲ್ಲಾ ವಿವಿಧ ರೋಗಗಳಿಗೆ ಸಂಶೋಧನೆಯನ್ನು ಮಾಡುವ ವಿಚಾರದಲ್ಲಿ ವಿಜ್ಞಾನಿಗಳ ಜತೆಗೆ ಸಹಕಾರ ಮಾಡುವ ವ್ಯವಸ್ಥೆ ನಡೆಯಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಅವರು ವಿಟ್ಲ ಮಂಗಳ ಮಂಟಪದಲ್ಲಿ ಭಾ.ಕೃ.ಸಂ. ಪ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾಂತೀಯ ಕ್ಷೇತ್ರ ವಿಟ್ಲ, ಅಡಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ ಆಶ್ರಯದಲ್ಲಿ ಅಡಕೆಯ ಎಲೆಚುಕ್ಕಿ ಮತ್ತು ಇತರ ಶಿಲೀಂದ್ರ ರೋಗಗಳ ನಿರ್ವಹಣೆ, ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನುರಿತ ಕೃಷಿ ಅಧಿಕಾರಿಯನ್ನು ನೇಮಕ ಮಾಡಿಕೊಂಡಿದ್ದು, ಸಾವಯವ ಕೃಷಿಯ ಬಗ್ಗೆ ಕ್ಯಾಂಪ್ಕೋ ಹೆಚ್ಚಿನ ಗಮನವನ್ನು ನೀಡಲಿದೆ. ಆಂದ್ರ ಪ್ರದೇಶ, ತಮಿಳುನಾಡು ಭಾಗದಲ್ಲಿ ಕೋಟಿಗಟ್ಟಲೆ ಅಡಿಕೆ ಗಿಡ ಹಾಕಿರುವುದರಿಂದ ಮುಂದಿನ ದಿನ ಹೇಗಿರಬಹುದೆಂಬ ಆತಂಕ ಸಾಂಪ್ರದಾಯಿಕ ಅಡಿಕೆ ಬೆಳೆಗಾರರಲ್ಲಿ ಸೃಷ್ಠಿಸಿದೆ. ಹೊರ ಭಾಗದವರಿಗೆ ಅಡಕೆ ಬೀಜ ನೀಡುವುದನ್ನು ಕಡಿಮೆ ಮಾಡುವ ಕಾರ್ಯ ಮಾಡಬೇಕಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಕೃಷಿಕರಿಗೆ ಇದು ತಲೆನೋವಾಗಿ ಪರಿಣಮಿಸಲಿದೆ. ನೀರಾವರಿ ಪ್ರದೇಶ ಹಾಗೂ ನಾಲೆ ಪ್ರದೇಶಗಳಲ್ಲಿ ಅಡಿಕೆ ತೋಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವ ಕಾರ್ಯವಾಗಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಸಿ.ಪಿ.ಸಿ.ಆರ್.ಐ. ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಮಾತನಾಡಿ ಸಿ.ಪಿ.ಸಿ.ಆರ್. ಐ. ಸಂಶೋಧನಾ ಕೇಂದ್ರ ಡಿಜಟಲೀಕರಣದಲ್ಲಿ ಹೆಚ್ಚಿನ ಮುಂದಡಿಯನ್ನು ಇಡಬೇಕಾಗಿದೆ. ಈ ಮೂಲಕ ಕೃಷಿಕರಿಗೆ ಹೆಚ್ಚಿನ ಜ್ಞಾನವನ್ನು ನೀಡುವ ಕಾರ್ಯವಾಗಬೇಕಾಗಿದೆ. ಪ್ರತಿ ಹಂತ ವಿಜ್ಞಾನಿಗಳ ಸಂಶೋಧನೆಯೂ ರೈತರಿಗೆ ತಲುಪ ಬೇಕಾಗಿದೆ. ಬದನಾಜೆಯವರು ಮಾಡಿರುವ ಸಂಶೋಧನೆಗಳನ್ನು ವಿಜ್ಞಾನಿಗಳು ದೃಢೀಕರಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಪತ್ರಕರ್ತ ಶ್ರೀಪಡ್ರೆ, ಕೃಷಿ ಸಂಶೋಧಕಾ ಶಂಕರ ಭಟ್ ಬದನಾಜೆ ಉಪಸ್ಥಿತರಿದ್ದರು. ಭಾ.ಕೃ.ಸಂ. ಪ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾಂತೀಯ ಕ್ಷೇತ್ರ ವಿಟ್ಲದ ಮುಖ್ಯಸ್ಥ ಡಾ. ಎಂ. ಕೆ. ರಾಜೇಶ್ ಸ್ವಾಗತಿಸಿದರು. ಹಿರಿಯ ವಿಜ್ಞಾನಿ ಡಾ. ಎನ್. ಆರ್. ನಾಗರಾಜ ವಂದಿಸಿದರು. ವಿಜ್ಞಾನಿ ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು.
ತಾಂತ್ರಿಕ - ಸಂವಾದ ಕಾರ್ಯಕ್ರಮ:
ಅಡಕೆಗೆ ಬಾಧಿಸುವ ಎಲೆಚುಕ್ಕಿ ಮತ್ತು ಇತರ ಶಿಲೀಂದ್ರ ರೋಗಗಳ ಸಮಗ್ರ ನಿರ್ವಹಣೆ ಬಗ್ಗೆ ಡಾ. ವಿನಾಯಕ ಹೆಗ್ಡೆ, ಅಡಕೆ ಮರದ ಆರೋಗ್ಯ ವೃದ್ಧಿಸುವಲ್ಲಿ ಪೋಷಕಾಂಶ ನಿರ್ವಹಣೆಯ ಮಹತ್ವದ ಬಗ್ಗೆ ಡಾ. ರವಿ ಭಟ್, ಪೋಷಕಾಂಶ ಕೊರತೆ, ರೋಗ ಮತ್ತು ಕೀಟಗಳನ್ನು ಅಡಕೆ ತೋಟದಲ್ಲಿ ಗುರುತಿಸುವಿಕೆ ಬಗ್ಗೆ ಪುರಂದರ ಕೋಟೇಲು ಮಾಹಿತಿಯನ್ನು ನೀಡಿದರು. ಎಲೆಚುಕ್ಕಿ ರೋಗವನು ಯಶಸ್ವಿಯಾಗಿ ನಿರ್ವಹಣೆ ಮಾಡಿದ ಕೃಷಿಕರಾದ ಏತಡ್ಕ ಗಣಪತಿ ಭಟ್, ಸತೀಶ್ ರಾವ್ ಅವರು ಅನುಭವ ಹಂಚಿಕೊಂಡರು. ರೈತರ ಜತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ಅಶೋಕ್ ಕಿನಿಲ ಉಪಸ್ಥಿತರಿದ್ದರು.