ಜಿಲ್ಲೆ

ಹಸುವಿಗೆ ಮಂಡಿ ಚಿಪ್ಪು ಚಿಕಿತ್ಸೆ ಯಶಸ್ವಿ

ಹನೂರು: ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಸಿಡಿಗಾಲಿನ (ಮಂಡಿ ಚಿಪ್ಪು ಜಾರುವಿಕೆ) ಸಮಸ್ಯೆಯಿಂದ ಬಳಲುತ್ತಿದ್ದ ಹಸುವಿಗೆ ಶುಕ್ರವಾರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಅವರು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಗ್ರಾಮದ ಮುನಿಸ್ವಾಮಿ ಎಂಬುವರಿಗೆ ಸೇರಿದ ಹಸುವಿನ ಮಂಡಿಯ ಚಿಪ್ಪು ಜಾರಿದ್ದು, ಕಳೆದ 15 ದಿನಗಳಿಂದ ಸಿಡಿಗಾಲಿನ ಸಮಸ್ಯೆಯಿಂದ ನರಳುತ್ತಿತ್ತು. ಈ ಬಗ್ಗೆ ಡಾ. ಸಿದ್ದರಾಜು ಅವರ ಗಮನಕ್ಕೆ ತರಲಾಗಿತ್ತು. ಶುಕ್ರವಾರ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ತೆರಳಿದ ವೈದ್ಯರು ಬಳಲುತ್ತಿದ್ದ ಹಸುವಿಗೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬಳಿಕ ಹಸು ಚೇತರಿಸಿಕೊಂಡು ಹೆಜ್ಜೆಯನ್ನು ಹಾಕಿದ್ದು, ರೈತನಲ್ಲಿ ಸಮಾಧಾನ ಮೂಡಿಸಿತು.