ಜಿಲ್ಲೆ

ಚರಂಡಿಯಲ್ಲಿ ಮೂಕ ಪ್ರಾಣಿಯ ರೋಧನ,  ಸ್ಥಳಿಯರ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಪ್ರಮುಖ ಮಾರುಕಟ್ಟೆ ಪ್ರದೇಶ ಹಿರೇಪೇಟೆ ಮುಖ್ಯ ರಸ್ತೆ ಚರಂಡಿಯೊಂದರಲ್ಲಿ ಬಿದ್ದಿದ್ದ ಮೂಕ ಪ್ರಾಣಿಯ ರೋಧನ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿತ್ತು.

ಇಲ್ಲಿ ಒಳಚರಂಡಿ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿ ಕೈಗೊಳ್ಳಲಾಗಿದ್ದು, ಅದನ್ನು ಅರ್ಧಂರ್ಬಧ ಮಾಡಿ ಕೈ ಬಿಡಲಾಗಿದೆ. ಈ ಪ್ರದೇಶದ ಹಲವು ಚರಂಡಿಗಳು ತೆರೆದ ಸ್ಥಿತಿಯಲ್ಲಿಯೇ ಇವೆ. ಜನ ಜಾನುವಾರುಗಳು ಆಯ ತಪ್ಪಿದರೆ ಅಪಾಯಕ್ಕೆ ಸಿಲುಕುವುದು ಗ್ಯಾರಂಟಿ. ಅಂತಹ ಅಪಾಯಕ್ಕೆ ಆಕಳು ಸಿಲುಕಿತ್ತು.

ಗರ್ಭಿಣಿ ಹಸುವೊಂದು ಕಾಲು ಜಾರಿ ತೆರೆದ ಚರಂಡಿಗೆ ಬಿದ್ದಿತ್ತು. ತಲೆ ಮೇಲಾಗಿದ್ದ ಹಸು ಅದರಲ್ಲಿ ವಿಲವಿಲ ಒದ್ದಾಡುತ್ತಿತ್ತು. ಸ್ಥಳಿಯರು ಆಕಳಿನ ಸ್ಥಿತಿ ನೋಡಿ ಮರುಗಿದರು. ಕೂಡಲೇ ಗೋಶಾಲೆ, ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.

ಕೆಲ ಯುವಕರು, ಅಂಗಡಿಕಾರರು, ಕೆಲಸಗಾರರು ಕೂಡಲೇ ಕಾರ್ಯ ಪ್ರವೃತ್ತರಾಗಿ ಹಗ್ಗ- ಕೋಲು ಮುಂತಾದವನ್ನು ಬಳಸಿ ಹಸುವನ್ನು ಮೇಲೆತ್ತಲು ಪ್ರಯತ್ನಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನ ಮಾಡಿ ಸುಮಾರು 20 ಜನ ಸೇರಿ ಹಸು ಮೇಲೆ ಎತ್ತಿದರು. ಆಕಳು ಮೇಲೆ ಬಂದಾಗ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು.

ಆಕಳಿಗೆ ಮೈ ತುಂಬಾ ಪರಚಿದ ಗಾಯಗಳಾಗಿದ್ದವು. ನೋವು ಅನುಭವಿಸುತ್ತಿದ್ದ ಹಸು ಕೆಲಹೊತ್ತು ಅಲುಗಾಡದ ಸ್ಥಿತಿಯಲ್ಲೇ ಮಲಗಿತ್ತು. ಔಷಧ, ಅರಿಶಿಣ ಹಚ್ಚಿ ಉಪಚಾರ ಮಾಡಲಾಯಿತು. ನೋವು ಪೂರ್ತಿ ವಾಸಿಯಾಗದಿದ್ದರೂ ಹಸು ಎದ್ದು ಸಮೀಪದ ಗಲ್ಲಿಯಲ್ಲಿ ಮರೆಯಾಯಿತು.

ಹಸು ಏನೋ ಬದುಕಿತು. ಆದರೆ, ಮೂಕ ಪ್ರಾಣಿಯ ರೋಧನ ಕೇಳುವವರು ಯಾರು? ತೆರೆದ ಚರಂಡಿಗಳನ್ನು ಮುಚ್ಚುವವರು ಯಾರು? ಎಂಬುದು ಸ್ಥಳಿಯರ ಪ್ರಶ್ನೆ ಎಂದು ಬಮ್ಮಾಪುರ ಓಣಿಯ ಶಾಂತಿನಾಥ ಹೋತಪೇಟಿ ಹೇಳುತ್ತಾರೆ.