ಸುಳ್ಯ: ದೇಶಕ್ಕೆ ಅನಿಷ್ಟ, ಅನಾಹುತ, ಅವಘಡಗಳು ಸಂಭವಿಸಲು ಮುಖ್ಯ ಕಾರಣ ಗೋ ಹತ್ಯೆ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಅಭಿಪ್ರಾಯಪಟ್ಟರು.
ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷದ್, ಬಜರಂಗ ದಳದ ಆಶ್ರಯದಲ್ಲಿ ನಡೆದ ಎರಡನೇ ವರ್ಷದ ಗೋಪೂಜೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗೋವು ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ನಿತ್ಯ ಜೀವನದಲ್ಲಿ ಗೋಮಾತೆಯ ಪ್ರಮುಖ ಪಾತ್ರವಿದೆ. ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಹೊರತಂದರೂ ನಿರಂತರವಾಗಿ ಕಟುಕರು ಗೋಹತ್ಯೆ ಮಾಡುತ್ತಿದ್ದಾರೆ. ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ಭೂಮಿಯನ್ನು ಕಬಳಿಸುವ ಸಂಚು ಇದೀಗ ನಡೆಯುತ್ತಿರುವುದು ವಿಷಾದನೀಯ ಎಂದರು.
ವಿಶ್ವ ಹಿಂದು ಪರಿಷತ್, ಬಜರಂಗ ದಳ ಸುಳ್ಯ ನಗರದ ಅಧ್ಯಕ್ಷ ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದಾಂಬಾ ಉತ್ಸವ ಸಮಿತಿ ಅಧ್ಯಕ್ಷ ಡಾ.ಡಿ.ವಿ.ಲೀಲಾಧರ್ ದೀಪ ಪ್ರಜ್ವಲಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಯೋಜನಾಧಿಕಾರಿ ಮಾಧವ ಗೌಡ, ವಿಶ್ವ ಹಿಂದು ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗ ದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ರೂಪೇಶ್ ಪೂಜಾರಿಮನೆ, ವಿಹಿಂಪ ಸುಳ್ಯ ಪ್ರಖಂಡ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ, ಬಜರಂಗ ದಳದ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು.
ಅಭಿಜ್ಞಾ ಭಟ್ ವೈಯುಕ್ತಿಕ ಗೀತೆ ಹಾಡಿದರು. ರಾಜೇಶ್ ಕಲ್ಲುಮುಟ್ಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ವಂದಿಸಿದರು. ಗಿರೀಶ್ ಕುಂಟಿನಿ ಮತ್ತು ತೀರ್ಥೇಶ್ ಯಾದವ್ ನಿರೂಪಿಸಿದರು.