ಮಂಗಳೂರು: ಗೋಹತ್ಯೆ ನಿಷೇಧ ಹೊಸ ಕಾಯ್ದೆ ಜಾರಿಯಾದ ಬಳಿಕ ನಾಲ್ಕು ತಿಂಗಳ ಅವಧಿಯಲ್ಲಿ ಅಕ್ರಮ ಗೋ ಸಾಗಾಟ, ಹತ್ಯೆಗೆ ಸಂಬಂಧಿಸಿ ರಾಜ್ಯದಲ್ಲಿ 29 ಎಫ್‌ಐಆರ್ ದಾಖಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಪ್ರಕರಣ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತ್ಯಧಿಕ. ಎರಡನೇ ಸ್ಥಾನದಲ್ಲಿ 7 ಪ್ರಕರಣಗಳೊಂದಿಗೆ ಮೈಸೂರು ಜಿಲ್ಲೆ ಇದೆ.
ದ.ಕ. ಜಿಲ್ಲೆಯಲ್ಲಿ ಮೀನು ಹಾಗೂ ಹಾಲು ಸಾಗಾಟದ ವಾಹನಗಳಲ್ಲಿ ದನದ ಮಾಂಸ ತುಂಬಿಸಿ ಸಾಗಾಟ ಮಾಡುತ್ತಿರುವುದನ್ನು ಮಂಗಳೂರಿನಲ್ಲಿ ಪತ್ತೆ ಮಾಡಲಾಗಿತ್ತು. ಲಾರಿಯಲ್ಲಿ ಅಕ್ರಮವಾಗಿ ಎಳೆಯ ಕರುಗಳ ಸಹಿತ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾಗ ಹಿಂದು ಸಂಘಟನೆ ಕಾರ್ಯಕರ್ತರು ಪತ್ತೆ ಮಾಡಿ ಬರ್ಕೆ ಪೊಲೀಸರಿಗೆ ಒಪ್ಪಿಸಿದ್ದರು.
ಸುಳ್ಯದಿಂದ ಗೋವುಗಳನ್ನು ಖರೀದಿಸಿ ಕೊಂಡೊಯ್ದು ಬೆಳ್ತಂಗಡಿಯ ರಬ್ಬರ್ ತೋಟದಲ್ಲಿ ಮಾಂಸ ಮಾಡುತ್ತಿದ್ದಲ್ಲಿಗೆ ಪೊಲೀಸರು ದಾಳಿ ನಡೆಸಿ 100 ಕಿ.ಗ್ರಾಂ. ಮಾಂಸ ವಶಕ್ಕೆ ಪಡೆದಿದ್ದರು. ಬೆಳ್ತಂಗಡಿಯಲ್ಲಿ ಅಕ್ರಮ ಕಸಾಯಿಖಾನೆ ಮಾಡಿ ಅಲ್ಲಿಂದ ನಗರ ಪ್ರದೇಶಕ್ಕೆ ಮಾಂಸ ಸಾಗಾಟ ಮಾಡಲಾಗುತ್ತಿತ್ತು. ಇವು ಪ್ರಮುಖ ಪ್ರಕರಣಗಳಾಗಿದ್ದು, ಉಳಿದಂತೆ ಅಕ್ರಮ ಸಾಗಾಟ ಮಾಡುತ್ತಿದ್ದಾಗ ಪತ್ತೆ ಮಾಡಲಾದ ಪ್ರಕರಣಗಳಾಗಿವೆ.
ಶಿಕ್ಷೆ, ದಂಡದ ಪ್ರಮಾಣ ಏರಿಕೆ: ಹೊಸ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಜೈಲು ಶಿಕ್ಷೆ, ದಂಡದ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಿ ಕಠಿಣ ಅಂಶಗಳನ್ನು ಸೇರಿಸಲಾಗಿದೆ. ಗೋಹತ್ಯೆ ನಡೆಯುವ ಪ್ರದೇಶವನ್ನು ಸೀಜ್ ಮಾಡಿ, ಜಾನುವಾರುಗಳನ್ನು ವಶಪಡಿಸಿಕೊಳ್ಳಲು ನೂತನ ತಿದ್ದುಪಡಿ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಸಬ್ ಇನ್‌ಸ್ಪೆಕ್ಟರ್ ಮೇಲಿನ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಕ್ರಮ ಗೋಹತ್ಯೆ, ಮಾಂಸ ಮಾರಾಟ ಕ್ರಿಮಿನಲ್ ಅಪರಾಧವಾಗಿದೆ. 3ರಿಂದ 7 ವರ್ಷ ಜೈಲು ಹಾಗೂ 5 ಲಕ್ಷ ರೂ. ತನಕ ದಂಡ ಪಾವತಿಸಬೇಕಾಗುತ್ತದೆ. ಅಪರಾಧ ಪುನರಾವರ್ತನೆಯಾದರೆ ಶಿಕ್ಷೆ ಪ್ರಮಾಣವೂ ಹೆಚ್ಚಾಗುತ್ತದೆ.
ಹೊಸ ಕಾಯ್ದೆ ಪ್ರಕಾರ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ವಿಳಾಸ, ಆಧಾರ್, ಮೊಬೈಲ್ ಸಂಖ್ಯೆ, ಸಾಗಣೆ ಉದ್ದೇಶ, ಜಾನುವಾರುಗಳ ವಯಸ್ಸು ಸಹಿತ ಮಾಹಿತಿ ನೀಡಿ ಪಶುಸಂಗೋಪನಾ ಇಲಾಖೆಯಿಂದ ದೃಢೀಕರಣ ಪತ್ರ ಪಡೆಯಬೇಕು.
ಎಲ್ಲೆಲ್ಲಿ ಎಷ್ಟೆಷ್ಟು ಕೇಸು?: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಹೊಸ ಕಾಯ್ದೆಯಡಿ ಜೂನ್ ತನಕ 58 ದೂರುಗಳು ಬಂದಿದ್ದು, 29 ಎಫ್‌ಐಆರ್ ದಾಖಲಾಗಿದೆ. 50 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಮೂರು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, 2 ಚಾರ್ಜ್‌ಶೀಟ್ ಸಲ್ಲಿಸುವ ಹಂತದಲ್ಲಿದೆ. ಉಳಿದ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ದ.ಕ. 8, ಮೈಸೂರು 7, ಚಿಕ್ಕಮಗಳೂರು 3, ತುಮಕೂರು, ಮಂಡ್ಯ ತಲಾ 2 ಹಾಗೂ ಹಾಸನ, ರಾಮನಗರ, ಉತ್ತರ ಕನ್ನಡ, ಕಲಬುರಗಿ, ವಿಜಯಪುರ, ಬಳ್ಳಾರಿ, ಕೊಡಗು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.