kovi 
ಜಿಲ್ಲೆ

ಕೋವಿ ಲೈಸೆನ್ಸ್ ಆನ್‌ಲೈನ್ ನಿಗಾ

Chethan padubidri

ಪ್ರಮುಖ ಮುಖ್ಯಾಂಶಗಳು

  • ನವೀಕರಣ 30 ದಿನ > ಹೊಸ ಪರವಾನಗಿ 60 ದಿನದಲ್ಲಿ ಲಭ್ಯ
  • ಅರ್ಜಿದಾರರಿಗೆ ತೊಂದರೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
  • ಪರವಾನಗಿ ಸಿಗುವಾಗ ರೈತರು ಹೈರಾಣಾಗುತ್ತಿದ್ದರು
ಮಂಗಳೂರು: ರೈತರ ಬಹುಕಾಲದ ಅಳಲಿಗೆ ಮುಕ್ತಿ ಸಿಕ್ಕಿದೆ ಎನ್ನಬಹುದು. ಇನ್ನು ಮುಂದಕ್ಕೆ ರೈತರಿಗೆ ಹೊಸ ಕೋವಿ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆ ನಿಗದಿತ ಸಮಯದಲ್ಲಿ ವಿಲೇವಾರಿಯಾಗಲಿದೆ.
ಕೋವಿ ಪ್ರಕ್ರಿಯೆಯಲ್ಲಿ ಲೋಪದೋಷಗಳಾಗದಂತೆ ಮತ್ತು ರೈತರಿಗೆ ಅಡೆತಡೆಗಳಿಲ್ಲದೆ ಪರವಾನಗಿ ಲಭಿಸುವಂತಾಗಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಮುತುವರ್ಜಿಯಲ್ಲಿ ಆನ್‌ಲೈನ್ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಜಿಲ್ಲಾಡಳಿತ ಅಳವಡಿಸಿಕೊಂಡಿದೆ. ಜಿಲ್ಲಾಧಿಕಾರಿಗಳ ಈ ನಿಲುವಿನಿಂದ ರೈತರು ಸಂತಸಪಟ್ಟಿದ್ದಾರೆ. ಈ ವ್ಯವಸ್ಥೆ ಜೂನ್ ತಿಂಗಳಿಂದ ಕಾರ್ಯರೂಪಕ್ಕೆ ಬರಲಿದೆ. ಅನಂತರದಲ್ಲಿ ಕೋವಿ ಹೊಸ ಪರವಾನಗಿ 60 ದಿನ ಮತ್ತು ನವೀಕರಣ 30 ದಿನಗಳಲ್ಲಿ ಆಗಲಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಅಲೆದಾಡಿ ಹೈರಾಣಾಗುತ್ತಿದ್ದ ರೈತರು

ಕೋವಿ ಹೊಸ ಪರವಾನಗಿ ಮತ್ತು ನವೀಕರಣ ಮಾಡುವಾಗ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ ಎನ್ನುವ ಕೂಗನ್ನು ರೈತರು ಪ್ರತೀ ಸಭೆಗಳಲ್ಲೂ ತೋಡಿಕೊಳ್ಳುತ್ತಿದ್ದರು. ಅವರ ಕೂಗು ನಿಜವಾಗಿಯೂ ಸರಿಯಾಗಿತ್ತು. ಫೈಲ್‌ಗಳು ಕಂದಾಯ ಇಲಾಖೆಯಿಂದ ಪೊಲೀಸ್, ಅಲ್ಲಿಂದ ಅರಣ್ಯ ಇಲಾಖೆ ಹೀಗೆ ಇಲಾಖೆಯಿಂದ ಇಲಾಖೆಗೆ ಸುತ್ತಾಡಿಕೊಂಡು ಪರವಾನಗಿ ಸಿಗುವಾಗ ರೈತರು ಹೈರಾಣಾಗುತ್ತಿದ್ದರು. ಸಭೆಗಳಲ್ಲಿ ರೈತ ಮುಖಂಡರು ಪದೇಪದೇ ಅಳಲು ತೋಡಿಕೊಳ್ಳುತ್ತಿದ್ದರು.
ಈ ಸಮಸ್ಯೆಯನ್ನು ಸ್ಥಳೀಯ ಶಾಸಕರುಗಳು ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದರು. ಬೇರೆ ಜಿಲ್ಲೆಗಳಲ್ಲಿ ಇಲ್ಲದ ನಿಯಮ ಇಲ್ಲೇಕೆ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ಮಾನಿಟರಿಂಗ್ ಸಿಸ್ಟಮ್ ಅನ್ನು ಅಳವಡಿಸಲು ಜಿಲ್ಲಾಡಳಿತ ಮುಂದಾಗಿದ್ದು, ಇದೀಗ ಅನುಷ್ಠಾನಕ್ಕೆ ತಂದಿದೆ.

ಕಾಡುಪ್ರಾಣಿಗಳಿಂದ ರಕ್ಷಣೆಗೆ ಕೋವಿ

ಅರಣ್ಯದ ಸುತ್ತಮುತ್ತಲಿನಲ್ಲಿ ಕೃಷಿ ಭೂಮಿಯನ್ನು ಹೊಂದಿರುವ ರೈತರಿಗೆ ಆನೆ, ಕಾಡುಕೋಣ, ಕಾಡುಹಂದಿ, ಮಂಗ, ನವಿಲು ಮೊದಲಾದ ಕಾಡು ಪ್ರಾಣಿಗಳ ನಿರಂತರವಾದ ಕಾಟದಿಂದ ಬೆಳೆ ನಾಶವಾಗುತ್ತಿದೆ. ಅದರಿಂದಾಗಿ ಪ್ರಾಣಿಗಳನ್ನು ಬೆದರಿಸಲು ಕೋವಿಗಳನ್ನು ಹೊಂದಿರುತ್ತಾರೆ. ಆದರೆ ಈ ಕೋವಿಗಳು ಪ್ರಾಣಿಗಳ ಬೇಟೆಗೆ ಇನ್ನಿತರ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯಲ್ಲಿ ಪರವಾನಗಿ/ನವೀಕರಣ ಅರ್ಜಿಯನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗುತ್ತಿತ್ತು.

ಎಲ್ಲಿಯೂ ಇಲ್ಲದ ನಿಯಮ ಇಲ್ಯಾಕೆ?

ದ.ಕ. ಜಿಲ್ಲೆಯಲ್ಲಿ ಸುಮಾರು 12 ಸಾವಿರಕ್ಕೂ ಮಿಕ್ಕಿ ಕೋವಿ ಪರವಾನಗಿದಾರರಿದ್ದಾರೆ. ಇದರಲ್ಲಿ ಸುಮಾರು 700ರಷ್ಟು ಕೋವಿದಾರರ ಪರವಾನಗಿ ನವೀಕರಣವಾಗಿಲ್ಲ. ಕೆಲವು ಮಂದಿಯ ಅರ್ಜಿ ತಿರಸ್ಕೃತಗೊಂಡಿದೆ. ರಾಜ್ಯದ ಬೇರೆ ಕಡೆ ಕೋವಿ ಪರವಾನಗಿ ನವೀಕರಣಕ್ಕೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 14ರ ಅನ್ವಯ ಪರವಾನಗಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಇರಬಾರದು, ಮಾನಸಿಕ ಸಮಸ್ಯೆಯಾಗಲಿ, ಶಾರೀರಿಕ ಅಸ್ವಸ್ಥತೆಯಾಗಲಿ ಇರಬಾರದು. ಆಯುಧದ ದುರ್ಬಳಕೆ ಮಾಡಿರಬಾರದು ಎನ್ನುವ ನಿಯಮಗಳಿವೆ. ಆದರೆ ದ.ಕ. ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಆಗಿರಬೇಕು. ಅದಕ್ಕೆ ಪರಿಹಾರ ಪಡೆದಿರಬೇಕು. ಈ ಬಗ್ಗೆ ಅರಣ್ಯ ಇಲಾಖೆ ಪ್ರಮಾಣೀಕರಿಸಬೇಕು ಎಂಬ ಷರತ್ತನ್ನು ಪೊಲೀಸ್ ಇಲಾಖೆ ಹಾಕುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎನ್ನುವುದು ಕೋವಿ ಬಳಕೆದಾರರ ಒಕ್ಕೂಟದವರ ಮಾತು.

ಮಾನಿಟರಿಂಗ್ ಹೇಗೆ?

ರೈತರು ಹಿಂದೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದರೋ ಅದೇ ರೀತಿ ಅರ್ಜಿ ಸಲ್ಲಿಸಬೇಕು. ಆ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಯವರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅಲ್ಲಿಂದ ಮಾನಿಟರಿಂಗ್ ಪ್ರಾರಂಭವಾಗುತ್ತದೆ. ಈ ಆನ್‌ಲೈನ್ ಪೋರ್ಟಲ್ ಸಾರ್ವಜನಿಕರ ವೀಕ್ಷಣೆಗೆ ಸಿಗುವುದಿಲ್ಲ. ಇದರ ಲಾಗಿನ್ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಾತ್ರ ಇರುತ್ತದೆ. ಅರ್ಜಿ ಸಲ್ಲಿಕೆಯಾದ ದಿನದಿಂದ ಯಾವ್ಯಾವ ಇಲಾಖೆಯಲ್ಲಿ ಆ ಫೈಲ್ ಇದೆ ಎನ್ನುವುದು ಡಿಸಿ, ಎಸ್ಪಿ, ಡಿಎಫ್‌ಒ ಅವರಿಗೆ ತಿಳಿಯುತ್ತಿರುತ್ತದೆ. ಒಂದು ವೇಳೆ 60 ದಿನ ಕಳೆದರೆ ಎಲ್ಲಿ ಲೋಪವಾಗಿದೆ ಎನ್ನುವುದು ಈ ಮೂವರಿಗೆ ತಿಳಿಯುತ್ತದೆ. ಇದೇ ಆನ್‌ಲೈನ್ ಮಾನಿಟರಿಂಗ್ ಸಿಸ್ಟಮ್.

ಕೋವಿ ಪರವಾನಗಿಯನ್ನು ಜೂನ್‌ನಿಂದ ಜಿಲ್ಲಾಡಳಿತ, ಎಸ್ಪಿ, ಡಿಎಫ್‌ಒ ಮಾನಿಟರಿಂಗ್ ಮಾಡಲಿದ್ದಾರೆ. ಅರ್ಜಿದಾರರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಈ ಸಿಸ್ಟಮ್ ಅನ್ನು ಅನುಷ್ಠಾನಗೊಳಿಸಿದ್ದೇವೆ. ಕೋವಿ ಪರವಾನಗಿ ಮತ್ತು ನವೀಕರಣ ಅರ್ಜಿಗಳು ನಿಯಮಾನುಸಾರ ನಿಗದಿತ ಅವಧಿಯಲ್ಲಿ ವಿಲೇವಾರಿಯಾಗಲಿದೆ.

— ದರ್ಶನ್ ಎಚ್.ವಿ., ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಆನ್‌ಲೈನ್ ಟ್ರ್ಯಾಕಿಂಗ್ ಅನುಷ್ಠಾನವಾಗಲಿ. ರಿಸಲ್ಟ್ ಬರಲಿ. ನಮಗೆ ಮಾತ್ರ ಅರಣ್ಯ ಇಲಾಖೆಯಿಂದ ಭಾರಿ ಅನ್ಯಾಯವಾಗುತ್ತಿದೆ. ಕಾರಣವೇ ಇಲ್ಲದೆ ನನ್ನ ಕೋವಿ ನವೀಕರಣ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದಾರೆ. ಇದೀಗ ಕೋವಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಮಾಡಿದ್ದೇನೆ. ಇನ್ನು ಕಾಡುಪ್ರಾಣಿಗಳು ಬೆಳೆಯನ್ನೆಲ್ಲ ತಿಂದು ಹೋದ ನಂತರವಾದರೂ ಸಿಗಬಹುದೇನೋ. ಕೋವಿ ವಿಷಯದಲ್ಲಿ ದ.ಕ. ಜಿಲ್ಲೆಯಲ್ಲಿ ಭಾರಿ ಅನ್ಯಾಯವಾಗುತ್ತಿದೆ.

— ಗಿರೀಶ್ ಸವಣೂರು, ಹಿರಿಯ ಕೃಷಿಕರು

  • ಚೇತನ್ ಪಡುಬಿದ್ರಿ