ಜಿಲ್ಲೆ

ಯೂರಿಯಾ ಮಿಶ್ರಿತ ಹುಲ್ಲು ತಿಂದು ಕರುಗಳ ಸಾವು

ಮಂಗಳೂರು: ಬೈಕಂಪಾಡಿ ಸಮೀಪ ಹೆದ್ದಾರಿ ಪಕ್ಕ ಬೆಳೆದಿದ್ದ ಯೂರಿಯಾ ಮಿಶ್ರಿತ ಹುಲ್ಲನ್ನು ತಿಂದ ಎರಡು ಕರುಗಳು ಶನಿವಾರ ಸಾವನ್ನಪ್ಪಿವೆ.

ಬೈಕಂಪಾಡಿಯ ಯಂಗ್‌ಸ್ಟಾರ್ ಬಳಿ ಲಾರಿಗಳಲ್ಲಿ ಯೂರಿಯಾ ತುಂಬಿ ಅದಕ್ಕೆ ಸರಿಯಾಗಿ ಮುಚ್ಚದ ಪರಿಣಾಮ ರಸಗೊಬ್ಬರ ರಸ್ತೆಗೆ ಬಿದ್ದಿದ್ದು ಅದು ಮಳೆನೀರಲ್ಲಿ ಕರಗಿ ಹುಲ್ಲಿನ ಜತೆ ಸೇರಿಕೊಂಡಿತ್ತು. ಈ ಹುಲ್ಲನ್ನು ತಿಂದ ಎರಡು ಕರುಗಳು ಸತ್ತಿದ್ದರೆ,ಇನ್ನೊಂದು ಗೋವು ಚಿಂತಾಜನಕ ಸ್ಥಿತಿಯಲ್ಲಿದೆ.

ಘಟನೆಗೆ ಸಂಬಂಧಿಸಿ ಸುರತ್ಕಲ್ ಪಶು ವೈದ್ಯರನ್ನು ಸಂಪರ್ಕಿಸಿ ಸ್ಧಳಕ್ಕೆ ತಕ್ಷಣ ಬರುವಂತೆ ವಿನಂತಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು, ನಂತರ ಸುರತ್ಕಲ್ ಆರೋಗ್ಯ ಇಲಾಖೆ, ಸ್ಧಳೀಯ ಟ್ರಾಫಿಕ್ ಠಾಣೆ ಹಾಗೂ ಮನಪಾ ಸದಸ್ಯರ ಗಮನಕ್ಕೆ ತಂದಿದ್ದಾರೆ. ಎನ್‌ಎಂಪಿಟಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಮೃತ ಕರುಗಳ ಅಂತಿಮ ಸಂಸ್ಕಾರವನ್ನು ಜಾಗರಣ ವೇದಿಕೆ ನೆರವೇರಿಸಿತು

ಕ್ರಮಕ್ಕೆ ಆಗ್ರಹ: ಯೂರಿಯಾ ಸಾಗಿಸುವ ವೇಳೆ ಸರಿಯಾಗಿ ಟಾರ್ಪಲ್ ಹಾಕದೆ ಸಂಚರಿಸುವ ಲಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಟ್ರಾಫಿಕ್ ಪೊಲೀಸರನ್ನು ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.