ಜಿಲ್ಲೆ

ಗಾಡಗೋಳಿ ನವಗ್ರಾಮದಲ್ಲಿ ಜೋಡೆತ್ತು, ಆಕಳು ಸಜೀವ ದಹನ

ಹೊಳೆಆಲೂರ: ಸಮೀಪದ ಗಾಡಗೋಳಿ ನವಗ್ರಾಮದ ರೈತ ಅಶೋಕ ಗಿರಿಯಪ್ಪ ಹೊಸೂರು ಅವರ ದನದ ಶೆಡ್ಡಿಗೆ ಗುರುವಾರ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಎರಡು ಎತ್ತು, ಒಂದು ಆಕಳು ಸಾವಿಗೀಡಾಗಿವೆ. ಅಲ್ಲದೆ, ಶೆಡ್​ನಲ್ಲಿದ್ದ ಕುಂಟಿ, ಕೊರಗಿ, ಹೊಟ್ಟು ಮೇವು ಸೇರಿದಂತೆ ಕೃಷಿ ಪರಿಕರು ಸುಟ್ಟು ಕರಕಲಾಗಿವೆ.

ರೈತ ಅಶೋಕ ಎರಡು ತಿಂಗಳ ಹಿಂದೆ ಸಾಲ ಮಾಡಿ 1.20 ಲಕ್ಷ ರೂ. ವೆಚ್ಚದಲ್ಲಿ ಜೋಡೆತ್ತು ಖರೀದಿಸಿದ್ದರು. ಅಲ್ಲದೆ, ದನ ಕಟ್ಟಲು ಶೆಡ್ ನಿರ್ವಿುಸಿಕೊಂಡಿದ್ದರು. ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಎತ್ತುಗಳ ಕೂಗಾಡಲಾರಂಭಿಸಿವೆ. ಅದನ್ನು ಕೇಳಿದ ಅಕ್ಕಪಕ್ಕದ ಮನೆಯವರು ರೈತ ಅಶೋಕ ಅವರನ್ನು ನಿದ್ರೆಯಿಂದ ಎಬ್ಬಿಸಿದ್ದಾರೆ. ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ರೋಣ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರೂ ಜೋಡೆತ್ತು ಹಾಗೂ ಒಂದು ಆಕಳು ಮೃತಪಟ್ಟಿದ್ದವು.

ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಎಂ.ಎಚ್. ಪಾಟೀಲ, ಮುಖ್ಯ ಪಶು ವೈದ್ಯಾಧಿಕಾರಿ ಬಿ.ಎಸ್. ಕುರಹಟ್ಟಿ, ಅಸೂಟಿ ಪಶು ವೈದ್ಯಾಧಿಕಾರಿ ಡಾ.ಸೋನಿಕಾ ಬಬಚಡೆ, ಎಎಸ್​ಆಯ್ ಬಿ.ಜಿ. ವರಕೇರಿ, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಕೋಳೆರಿ, ಪ್ರಕಾಶ ಬಜೇಂತ್ರಿ, ಎಸ್.ವೈ. ಗಾಣಿಗೇರ, ವೀರಣ್ಣ ತಳವಾರ, ಹರೀಶ ಕಂಠಿ ಭೇಟಿ ನೀಡಿ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಜೋಡೆತ್ತು, ಆಕಳ ಅಂತ್ಯಕ್ರಿಯೆ

ಜೋಡೆತ್ತು, ಆಕಳು ಹಾಗೂ ಕೃಷಿ ಪರಿಕರ ಸುಟ್ಟು ಹಾನಿಗೀಡಾಗಿದ್ದರಿಂದ ರೈತ ಅಶೋಕ ಹೊಸೂರು ಅವರಿಗೆ ಗ್ರಾಮದ ಹಿರಿಯರು ಸಹಾಯ ಮಾಡುವ ಭರವಸೆ ನೀಡಿದರು. ಜೋಡೆತ್ತು ಹಾಗೂ ಆಕಳ ಕಳೇಬರಕ್ಕೆ ಮಂಗಳಾರತಿ, ಮಂತ್ರಗೋಷ್ಠಿ ನಡೆಸುವ ಮೂಲಕ ಸಂಪ್ರದಾಯಬದ್ಧವಾಗಿ ರೈತನ ಹೊಲದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.