ಬ್ಯಾಡಗಿ: ತಾಲೂಕಿನ ಆಣೂರು ಗ್ರಾಮದ ಗುಡ್ಡದ ಬಳಿಯ ಹೊಲದಲ್ಲಿ ಚಿರತೆ ದಾಳಿಗೆ ಆಕಳು ಬಲಿಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಗುರುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಗ್ರಾಮದ ನಾಲ್ಕಾರು ದನಗಾಯಿಗಳು ಗ್ರಾಮದ ಗುಡ್ಡದ ಬಳಿಯಿರುವ ಹೊಲಗಳತ್ತ ಜಾನುವಾರು ಮೇಯಿಸಲು ತೆರಳಿದ್ದೆವು. ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಪೊದೆಯಲ್ಲಿ ಅವಿತುಕೊಂಡಿದ್ದ ಚಿರತೆ, ಮೇಯುತ್ತಿದ್ದ ಆಕಳಿನ ಮೇಲೆ ದಾಳಿ ನಡೆಸಿ ಗಂಟಲು ಹಿಡಿದಿದೆ. ಆಕಳು ಕೊಸರಾಡಿದರೂ ಬಿಡದ ಚಿರತೆ, ಕುತ್ತಿಗೆ ಹಾಗೂ ಹೊಟ್ಟೆ ಸೀಳಿ ಹಾಕಿತು. ಈ ಹೊತ್ತಲ್ಲಿ ಒಂದಿಬ್ಬರು ಜೋರಾಗಿ ಕೂಗಿದ್ದರಿಂದ ಚಿರತೆ ಆಕಳು ಬಿಟ್ಟು ಓಡಿ ಹೋಗಿದೆ ಎಂದು ಪ್ರತ್ಯಕ್ಷ ದಶಿರ್ ಚಂದ್ರಪ್ಪ ಗಾಣಿಗೇರ ಹೇಳಿದರು.
15 ದಿನಗಳಿಂದ ಬೀಡುಬಿಟ್ಟ ಚಿರತೆ: ಎರಡು ತಿಂಗಳಿಂದ ಬಿದರಕಟ್ಟೆ ಬಳಿ ಕಾಣಿಸಿಕೊಂಡಿದ್ದ ಚಿರತೆಗಳು, ಈಗ ಆಣೂರು ಗುಡ್ಡದಲ್ಲಿ ಬೀಡುಬಿಟ್ಟಿವೆ ಎನ್ನಲಾಗುತ್ತಿದೆ. ರೈತರು ತೋಟಗಳಲ್ಲಿ ಸಾಕಿದ ನಾಯಿಗಳು ಒಂದೊಂದಾಗಿ ಕಾಣೆಯಾಗಿವೆ. ರೈತರು ಎಲ್ಲಿಯಾದರೂ ಹೋಗಿರಬಹುದು ಎಂದು ಮೌನವಾಗಿದ್ದರು. ಆಕಳ ಮೇಲಿನ ಚಿರತೆ ದಾಳಿ ಟನೆಯಿಂದಾಗಿ ನಾಯಿಗಳನ್ನು ಚಿರತೆಗಳೇ ಭಕ್ಷಿಸಿರಬಹುದು ಎಂದು ಅಂದಾಜಿಸಲಾಗಿದೆ.
ಚಿರತೆ ಹಾವಳಿಯಿಂದ ಭಯಭೀತರಾಗಿರುವ ರೈತರು ಹಾಗೂ ಕೂಲಿಕಾರರು ಹೊಲಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದ ಹೊರವಲಯ ಹಾಗೂ ಹೊಲಗದ್ದೆಗಳಲ್ಲಿ ಜಾನುವಾರು ಕಟ್ಟಿ ಬರಲು ಅಂಜುವಂತಾಗಿದೆ. ನಾಲ್ಕಾರು ದಿನಗಳ ಹಿಂದೆ ಕೆಲ ರೈತರಿಗೆ ಚಿರತೆ ಕಾಣಿಸಿಕೊಂಡಿತ್ತಾದರೂ ಯಾರಿಗೂ ತೊಂದರೆ ನೀಡಿರಲಿಲ್ಲ. ಆದರೆ, ಗುರುವಾರ ಚಿರತೆ ದಾಳಿಗೆ ಆಕಳು ಬಲಿಯಾಗಿರುವುದು ಗ್ರಾಮಸ್ಥರಲ್ಲಿ ನಿದ್ದೆಗೆಡಿಸಿದೆ.
ಎರಡು ವರ್ಷಗಳಿಂದ ಕದರಮಂಡಲಗಿ, ಮೋಟೆಬೆನ್ನೂರು, ಶಿಡೇನೂರು, ಕಾಟೇನಹಳ್ಳಿ ಗ್ರಾಮಗಳ ಗುಡ್ಡಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ರೈತ ಸಮೂಹ ತೀವ್ರ ಭಯದಲ್ಲಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸುದ್ದಿಯಾಗುತ್ತಿದ್ದಂತೆ ಬೋನು ಅಳವಡಿಸಿ ಕೈತೊಳೆದುಕೊಳ್ಳುವ ಮೂಲಕ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.