- ಎ.ಆರ್. ವೆಂಕಟೇಶ್ ಹಾಸನ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ಬರಡು ರಾಸುಗಳ ವಿಲೇವಾರಿ ರೈತರಿಗೆ ದೊಡ್ಡ ತಲೆನೊವಾಗಿತ್ತು. ಈ ಸಮಸ್ಯೆ ಅರಿತ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ತೆರೆಯಲು ಮುಂದಾಗಿದೆ. ಅಲ್ಲದೆ ಈಗಾಗಲೇ ನಡೆಯುತ್ತಿರುವ ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಯೋಜನೆ ಹಾಕಿಕೊಂಡಿದೆ. ಜೊತೆಗೆ ಜಾನುವಾರು ರಕ್ಷಣೆಯಲ್ಲಿ ಸಾರ್ವಜನಿಕರು ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಲು ರಾಜ್ಯ ಸರ್ಕಾರ ‘ಪುಣ್ಯಕೋಟಿ ದತ್ತು ಯೋಜನೆ’ ಜಾರಿಗೊಳಿಸಿದೆ. ಈ ಯೋಜನೆ ಮೂಲಕ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿರುವ ಗೋವುಗಳನ್ನು ಸಾರ್ವಜನಿಕರು ನೇರವಾಗಿ ದತ್ತು ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಒಟ್ಟು ಹಸು ಮತ್ತು ಎಮ್ಮೆಗಳು ಸೇರಿ 6.56 ಲಕ್ಷ ರಾಸುಗಳಿವೆ. ಆದರೆ ಇರುವುದು ಮಾತ್ರ 3 ಗೋಶಾಲೆಗಳು. ವಿಶೇಷ ಅಂದರೆ ಈಗ ಇರುವ ಮೂರು ಗೋಶಾಲೆಗಳೂ ಅರಸೀಕೆರೆ ತಾಲೂಕಿನಲ್ಲಿರುವುದು. ಅರಸೀಕೆರೆ ತಾಲೂಕು ಹಬ್ಬನಘಟ್ಟ ಅಮೃತ್ ಮಹಲ್ ಕಾವಲಿನಲ್ಲಿ ಸರ್ಕಾರಿ ಗೋಶಾಲೆ ಇದೆ. ಬಾಣಾವರದಲ್ಲಿ ಶ್ರೀ ಭಗವಾನ್ ಮಹಾವೀರ ಗೋಶಾಲೆ ಮತ್ತು ಅರಸೀಕೆರೆಯಲ್ಲಿ ಕಸ್ತೂರಬಾ ಗಾಂಧಿ ಗೋಶಾಲೆ ಇವೆ. ಈ ಮೂರು ಗೋಶಾಲೆಗಲ್ಲಿ ಒಟ್ಟು 402 ಗೋವುಗಳನ್ನು ಸಾಕಲಾಗುತ್ತಿದೆ.
ಏನಿದು ಪುಣ್ಯಕೋಟಿ ದತ್ತು ಯೋಜನೆ:
ಬಿಡಾಡಿ, ನಿರ್ಗತಿಕ ಮತ್ತು ಅಪಘಾತಕ್ಕೊಳಗಾದ ಹಾಗೂ ಅಕ್ರಮ ಸಾಗಣೆ ಮೊದಲಾದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳುವ ಜಾನುವಾರುಗಳನ್ನು ಸಂರಕ್ಷಿಸಿ ಸರ್ಕಾರಿ, ಖಾಸಗಿ ಗೋಶಾಲೆಗಳಲ್ಲಿಟ್ಟು ಪಾಲನೆ ಮಾಡಲಾಗುತ್ತಿದೆ. ಗೋಶಾಲೆಗಳ ನಿರ್ವಹಣೆಗೆ ಪ್ರತಿ ವರ್ಷ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಹಾಗಾಗಿ ಗೋಶಾಲೆಗಳನ್ನು ಆತ್ಮ ನಿರ್ಭರವಾಗಿಸಲು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜಾನುವಾರುಗಳ ಪೋಷಣೆ ಮತ್ತು ಇತರೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಲಾಗಿದೆ.
ರಾಸುಗಳನ್ನು ದತ್ತು ಪಡೆಯುವುದು ಹೇಗೆ?
ರಾಸು ದತ್ತು ಸ್ವೀಕಾರಕ್ಕೆ ಆಸಕ್ತಿ ಹೊಂದಿರುವವರು ಮೊದಲು ಪುಣ್ಯಕೋಟಿ ದತ್ತು ಯೋಜನೆಯ ಅಧಿಕೃತ ವೆಬ್‌ಸೈಟ್ ಠಿಠಿ://ಟ್ಠ್ಞಟಠಿಜಿ.ಚ್ಟ.ಜ್ಞಿ ಗೆ ಭೇಟಿ ನೀಡಬೇಕು, ವೆಬ್‌ಸೈಟ್‌ನ ಮುಖಪುಟದಲ್ಲಿ ಹಸು ದತ್ತು ತೆಗೆದುಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಹೀಗೆ ಕ್ಲಿಕ್ ಮಾಡುತ್ತಿದ್ದಂತೆ ಹೊಸ ಪುಟ ತೆರೆದುಕೊಳ್ಳುತ್ತದೆ. ವೆಬ್‌ಸೈಟ್ ತೋರಿಸುವ ಸೂಚನೆ ಅನುಸರಿಸಿ ನಿಮಗೆ ಬೇಕಾದ ಗೋಶಾಲೆಯ, ಬೇಕಾದ ರಾಸನ್ನು ದತ್ತ ಪಡೆಯಬಹುದು. ಮೂರು ತಿಂಗಳ ಅವಧಿಗೆ, 6, 9 ತಿಂಗಳು ಅಥವಾ 1-5 ವರ್ಷಗಳವರೆಗೆ ಹಸುವನ್ನು ದತ್ತು ತೆಗೆದುಕೊಳ್ಳುವ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಪುಣ್ಯಕೋಟಿ ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಯ ಒಂದು ರಾಸಿಗೆ ದಿನಕ್ಕೆ 70 ರೂ. ರಂತೆ ತಮ್ಮ ಕೈಲಾದಷ್ಟು ರಾಸುಗಳಿಗೆ, ತಮ್ಮ ಶಕ್ತಿ ಇರುವಷ್ಟು ದಿನಗಳವರೆಗೆ ನೆರವು ನೀಡಬಹುದಾಗಿದೆ.
ವರ್ಷಕ್ಕೆ ಲಕ್ಷ ಕರುಗಳ ಜನನ:
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ಅದರ ಮೊದಲ ಪರಿಣಾಮ ಉಂಟಾಗಿದ್ದು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿಸಿಕೊಂಡಿರುವ ರೈತರ ಮೇಲೆ. ಬಹುತೇಕ ರೈತರು ಪಾಲನೆ ಮಾಡುತ್ತಿರುವುದು ಮಿಶ್ರತಳಿ ಹಸು ಮತ್ತು ಎಮ್ಮೆಗಳನ್ನು. ಹಾಗಾಗಿ ಅವುಗಳಿಗೆ ಗಂಡು ಕರು ಹುಟ್ಟಿದರೆ ಯಾವುದೇ ಉಪಯೋಗವಿಲ್ಲ ಎಂದು ವಿಲೇವಾರಿ ಮಾಡಲು ಬಯಸುತ್ತಾರೆ. ಜಿಲ್ಲೆಯಲ್ಲಿ ವರ್ಷಕ್ಕೆ ಅಂದಾಜು ಒಂದು ಲಕ್ಷ ಕರುಗಳ ಜನನವಾಗುತ್ತದೆ. ಅವುಗಳಲ್ಲಿ ಶೇಕಡ 60 ರಷ್ಟು ಹೆಣ್ಣು ಕರುಗಳಾದರೆ, ಉಳಿದ ಶೇ. 40 ಗಂಡು ಕರುಗಳು. ಆದರೆ ಮಿಶ್ರತಳಿ ಹಸು ಮತ್ತು ಎಮ್ಮೆಗಳಿಗೆ ಜನಿಸುವ ಗಂಡು ಕರುಗಳನ್ನು ಸಾಕಲು ರೈತರು ಬಯಸುವುದಿಲ್ಲ. ಆದರೆ ಮಾರುವಂತೆಯೂ ಇಲ್ಲ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಅಲ್ಲದೆ ಬರಡು ರಾಸುಗಳನ್ನು ಸಹ ಕಸಾಯಿಖಾನೆಗೆ ಸಾಗಹಾಕುತ್ತಿದ್ದರು. ಕಾನೂನು ಕ್ರಮಗಳಿಗೆ ಹೆದರಿ ಎಳೆಯ ಕರುಗಳನ್ನು ಕಾಡಿಗೆ ಬಿಟ್ಟು ಬರುವುದು, ಅಥವಾ ಸಂತೆ ಸ್ಥಳಕ್ಕೆ ತಂದು ಬಿಟ್ಟು ಹೋಗುವುದು ಮಾಡುತ್ತಿದ್ದರು. ಪುಣ್ಯಕೋಟಿ ದತ್ತು ಯೋಜನೆ ಜಾರಿಯಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.
ಲಿಂಗ ನಿರ್ಧರಿತ ವೀರ್ಯ ಬಳಕೆ:
ಗಂಡು ಕರುಗಳ ಸಂತಾನ ಕಡಿಮೆ ಮಾಡಿ ರೈತರ ಸಮಸ್ಯೆಗೆ ಪರಿಹಾರ ಒದಗಿಸಲು ಈಗ ಪಶುಪಾಲನಾ ಇಲಾಖೆಯು ಸುಧಾರಿತ ವಿದೇಶಿ ತಂತ್ರಜ್ಞಾನದ ಲಿಂಗ ನಿರ್ಧರಿತ ವೀರ್ಯ ಬಳಸಿ ಕೃತಕ ಗರ್ಭಧಾರಣೆ ಮಾಡುವ ಯೋಜನೆ ಜಾರಿಗೊಳಿಸಿದೆ. ಇದರಿಂದ ಹಸು ಅಥವಾ ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡಿಸುವ ಹಂತದಲ್ಲೇ ರೈತರು ತಾವು ಬಯಸಿದ ಕರುವನ್ನು ಪಡೆಯಲು ಅವಕಾಶ ನೀಡಿದಂತಾಗಿದೆ. ಇದು ಶೇಕಡ 90 ರಷ್ಟು ಫಲ ನೀಡಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೆಶಕ ಡಾ. ರಮೇಶ್ ತಿಳಿಸಿದ್ದಾರೆ.
‘‘ರೈತರು ತಮ್ಮ ರಾಸುಗಳ ಗಂಡು ಕರುಗಳನ್ನು ಕನಿಷ್ಠ ಮೂರು ತಿಂಗಳು ಸಾಕಿ ನಂತರ ಗೋಶಾಲೆಗೆ ತಂದು ಬಿಡಬಹುದಾಗಿದೆ. ಅಲ್ಲದೆ ಬರಡು ರಾಸುಗಳನ್ನು ಕಟುಕರಿಗೆ ಮಾರದೆ ಗೋಶಾಲೆಗೆ ಕಳುಹಿಸಬೇಕು. ಜಿಲ್ಲೆಯಲ್ಲಿ ಈಗಿರುವ 3 ಗೋಶಾಲೆಗಳ ಜೊತೆಗೆ ಮತ್ತೆ 3 ಗೋಶಾಲೆಗಳನ್ನು ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಯುತ್ತಿದೆ. ಗೋ ರಕ್ಷಣಾ ಕಾರ್ಯದಲ್ಲಿ ದಾನಿಗಳು ಮತ್ತು ಸಾರ್ವಜನಿಕರು ಕೈ ಜೋಡಿಸುವಂತಾಗಲು ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದಿದ್ದು, ಇದರ ಸದುಪಯೋಗ ಪಡೆಯಬೇಕು.’’- ಡಾ. ರಮೇಶ್, ಉಪ ನಿರ್ದೇಶಕ, ಪಶುಪಾಲನಾ ಇಲಾಖೆ.