ಜಿಲ್ಲೆ

ಹೊಸ ವರ್ಷಕ್ಕೆ ಲಸಿಕೆ: 1ನೇ ಹಂತದ ಪರೀಕ್ಷೆ ಯಶಸ್ವಿ, ಶರವೇಗದ ಸಿದ್ಧತೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರೊನಾ ಮಹಾಮಾರಿಯಿಂದ ರಾಜ್ಯದ ಜನತೆ ತತ್ತರಿಸಿರುವ ಸಂದರ್ಭದಲ್ಲೇ ಸರ್ಕಾರದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕರೊನಾ ರೋಗನಿರೋಧಕ ಲಸಿಕೆ ತಯಾರಿ ಸಿದ್ಧತೆ ಶರವೇಗದಲ್ಲಿ ಮುಂದುವರಿದಿದ್ದು 2021ರ ವರ್ಷಾರಂಭದಲ್ಲಿ ಜನರಿಗೆ ಲಭಿಸುವ ಸಾಧ್ಯತೆ ಗೋಚರಿಸಿದೆ.

ಮಂಗಳವಾರ ವಿಧಾನಸೌಧದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ಆಸ್ಟ್ರಾಜನಿಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಕರೊನಾ ಲಸಿಕೆ ಪ್ರಗತಿ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಸುಧಾಕರ್ ಹೇಳಿದ್ದು ಇಷ್ಟು...

ಮೊದಲ ಹಂತದ ಪ್ರಯೋಗ ಯಶಸ್ವಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಸ್ಟ್ರಾಜನಿಕಾ ಸಂಸ್ಥೆ ಒಡಂಬಡಿಕೆ ಮಾಡಿಕೊಂಡು ಪ್ರಯೋಗ ನಡೆಸಲಾಗುತ್ತಿದೆ. ಪುಣೆಯ ಸೇರಂ ಸಂಸ್ಥೆ ಮತ್ತು ಮೈಸೂರಿನ ಜೆಎಸ್​ಎಸ್ ಸಂಸ್ಥೆ ಜತೆಗೂ ಒಪ್ಪಂದವಾಗಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, 18 ವರ್ಷ ಮೇಲ್ಪಟ್ಟ, 50 ವರ್ಷ ಒಳಪಟ್ಟ ಕರೊನಾ ಬಾರದವರ ಮೇಲೆ ಪ್ರಯೋಗಿಸಲಾಗಿದೆ. ಹೀಗೆ ಪ್ರಯೋಗಕ್ಕೆ ಒಳಪಟ್ಟವರಲ್ಲಿ 28 ದಿನಗಳಲ್ಲೇ ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗಿದೆ. ಇದರಿಂದ ವೈರಸ್ ವಿರುದ್ಧ ಹೋರಾಟ ಸಾಧ್ಯವಾಗಲಿದೆ ಎನ್ನುವುದು ದೃಢವಾಗಿದೆ. ಪ್ರಯೋಗದ ಎರಡು, ಮೂರನೇ ಹಂತದಲ್ಲಿ ಕರೊನಾ ಬಂದವರ ಮೇಲೆ ಪ್ರಯೋಗಿಸಲಾಗುತ್ತಿದೆ. 5ರಿಂದ 12 ವರ್ಷ, 18 ರಿಂದ 55 ವರ್ಷ ಮತ್ತು 55 ವರ್ಷ ಮೇಲ್ಪಟ್ಟವರ ಮೇಲೆ ಪ್ರಯೋಗ ಆಗಲಿದ್ದು, ಅಲ್ಲಿಯೂ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಸಮಿತಿ ರಚನೆ: ಕೇಂದ್ರ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಆರೋಗ್ಯ ತಜ್ಞರು, ತಾಂತ್ರಿಕ ಪರಿಣತರು, ಪೂರೈಕೆದಾರರನ್ನು ಒಳಗೊಂಡಂತೆ ತಾಂತ್ರಿಕ ಸಮಿತಿ ರಚಿಸಿದ್ದು, ಲಸಿಕೆಯ ಪೂರೈಕೆ, ಸಂಗ್ರಹಣೆ, ವಿತರಣೆ ಕುರಿತು ಸಮಿತಿ ಸಲಹೆ ನೀಡಲಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದೆಂದರು.

100 ಕೋಟಿ ಜನರಿಗೆ ಲಸಿಕೆ

56 ದಿನಗಳ ಹಿಂದೆ 1ನೇ ಹಂತದ ಪ್ರಯೋಗ ನಡೆದಿದೆ. 2 ಹಾಗೂ 3 ನೇ ಹಂತದಲ್ಲಿ ದೇಶದ 1,600 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲು ಉದ್ದೇಶಿಸಲಾಗಿದೆ. ಆದರೆ, ಇದರಲ್ಲಿ ಇನ್ನೂ ಹೆಚ್ಚು ಜನರನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸಬೇಕೆಂದು ಸಂಸ್ಥೆಗೆ ಸರ್ಕಾರ ಕೋರಿದೆ. ರಾಜ್ಯದಲ್ಲಿ ಲಸಿಕೆ ವಿತರಣೆ ಸಿದ್ಧತೆ ಕುರಿತು ರ್ಚಚಿಸಲಾಗಿದೆ. 100 ಕೋಟಿ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವಿರುವುದಾಗಿ ಉತ್ಪಾದನಾ ಸಂಸ್ಥೆ ಖಚಿತಪಡಿಸಿದೆ.

ಯಾರ್ಯಾರಿಗೆ ಲಸಿಕೆ?

ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ, ಬಳಿಕ ವಯೋವೃದ್ಧರು, ನಾನಾ ಕಾರಣಕ್ಕೆ ಅನಾರೋಗ್ಯ ಹೊಂದಿರುವವರಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಲಸಿಕೆ ನೀಡಲು ಯೋಜಿಸಲಾಗಿದೆ.

ಉಚಿತ ಲಸಿಕೆ ನೀಡಿಕೆ

ಲಸಿಕೆಯ ದರ ನಿಗದಿ ಬಗ್ಗೆ ಚರ್ಚೆಯಾಗಿಲ್ಲ. ಆದರೆ, ಆರ್ಥಿಕ ಸಂಕಷ್ಟದಲ್ಲಿಯೂ ಸರ್ಕಾರ ಕೋವಿಡ್ ಪರೀಕ್ಷೆ, ಚಿಕಿತ್ಸೆ ಮೊದಲಾದ ವೆಚ್ಚಗಳನ್ನು ಭರಿಸುತ್ತಾ ಬಂದಿದೆ. ಅದೇ ರೀತಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ವಿವರಿಸಿದರು.

ಪ್ರಾಮಾಣಿಕ ಅಂಕಿ ಅಂಶ

ನಾನು ಆರೋಗ್ಯ ಖಾತೆ ವಹಿಸಿಕೊಂಡ ಬಳಿಕ ಕಾಕತಾಳೀಯವಾಗಿ ಕರೊನಾ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವ ಬಗ್ಗೆ ಕೆಲವರು ಸಂಶಯದಿಂದ ನೋಡುತ್ತಿದ್ದಾರೆ. ಆದರೆ, ನಾವು ಯಾವುದೇ ಅಂಕಿ-ಸಂಖ್ಯೆಯನ್ನು ವ್ಯತ್ಯಾಸ ಮಾಡುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ ರಾಜ್ಯ ಸರ್ಕಾರ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ನಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಯೊಬ್ಬ ಕರೊನಾ ಯೋಧರ ಪ್ರಯತ್ನ ಇದಕ್ಕೆ ಕಾರಣವಾಗಿದೆ ಎಂದರು.

3 ತಿಂಗಳು ಎಚ್ಚರಿಕೆಯಲ್ಲಿರಿ

ನವೆಂಬರ್, ಡಿಸೆಂಬರ್, ಜನವರಿಯ ಚಳಿಗಾಲದ ಅವಧಿಯಲ್ಲಿ ಕರೊನಾ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಜೇಶನ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಭೆಯಲ್ಲಿದ್ದವರು

ಆಸ್ಟ್ರಾಜನಿಕಾ ವ್ಯವಸ್ಥಾಪಕ ನಿರ್ದೇಶಕ ಗಗನ್ ದೀಪ್ ಸಿಂಗ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್

ದೇಶಾದ್ಯಂತ ಒಂದೇ ನೀತಿ

ಹುಬ್ಬಳ್ಳಿ: ಕರೊನಾ ಲಸಿಕೆ ವಿತರಣೆಯಲ್ಲಿ ದೇಶದಾದ್ಯಂತ ಒಂದೇ ನೀತಿ ಇರಲಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ರಾಜಕೀಯ ಇಲ್ಲ. ದೇಶ-ರಾಜ್ಯಗಳಿಗೆ ಪ್ರತ್ಯೇಕ-ಪ್ರತ್ಯೇಕ ನೀತಿ ಇರುವುದಿಲ್ಲ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಹೀಗೆ ಆದ್ಯತೆ ಮೇರೆಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲೂ ಇದೇ ರೀತಿ ಸಿದ್ಧತೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ ಅವರು ತಿಳಿಸಿದ್ದಾರೆ ಎಂದರು. ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ 19 ದಿನ ಕಾಲ ಮನೆಯಲ್ಲೇ (ಕ್ವಾರಂಟೈನ್) ಇದ್ದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 17 ದಿನ ಕ್ವಾರಂಟೈನ್ ಇರುವುದು ಕಡ್ಡಾಯವಾಗಿತ್ತೆಂದು ಜೋಶಿ ಹೇಳಿದರು.

ಈ ಅವಧಿಯನ್ನು ಪುಸ್ತಕ ಓದಲು ಬಳಸಿಕೊಂಡಿದ್ದೇನೆ. ತೇಜೋ ತುಂಗಭದ್ರಾ, ಶಿವಾಜಿ ಮಹಾರಾಜರ ನಾಯಕತ್ವದ 22 ಗುಣಗಳು ಹಾಗೂ ಎಸ್.ಎಲ್. ಭೈರಪ್ಪ ಅವರ ‘ಆವರಣ’ ಕಾದಂಬರಿಯನ್ನು ಓದಿದ್ದೇನೆ. ವಿಧಾನ ಪರಿಷತ್ ಚುನಾವಣೆ ಸಂಬಂಧ ಪಕ್ಷದ ಪ್ರಮುಖರೊಂದಿಗೆ ಫೋನ್ ಕರೆ ಮಾಡಿ ಚರ್ಚೆ ನಡೆಸಿದ್ದೆ ಎಂದು ತಿಳಿಸಿದರು.

ಮೈಕೈ ನೋವು ಹಾಗೂ ಸಾಧಾರಣ ಜ್ವರ ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಂಡಿದ್ದೆ. ಕರೊನಾ ದೃಢಪಟ್ಟ ಬಳಿಕ ಮೊದಲೆರಡು ದಿನ ಸಾಧಾರಣ ಜ್ವರ ಮುಂದುವರಿದಿತ್ತು. ನಂತರ ಆರೋಗ್ಯ ಸಾಮಾನ್ಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ತಕ್ಷಣ ಕರೆ ಮಾಡಿ ನನ್ನ ವೈದ್ಯಕೀಯ ವರದಿಯನ್ನು ದೆಹಲಿಗೆ ಕಳುಹಿಸಿ ಕೊಡುವಂತೆ ಹೇಳಿದ್ದರು. ಅದರಂತೆ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ಅಲ್ಲಿಯ ನುರಿತ ವೈದ್ಯರು, ಹೆಚ್ಚಿನ ಅಪಾಯವಿಲ್ಲ. ಮನೆಯಲ್ಲಿಯೇ ಚಿಕಿತ್ಸೆ ಪಡೆಯಿರಿ ಎಂದು ಸೂಚಿಸಿದ್ದರು ಎಂದು ಜೋಶಿ ವಿವರಿಸಿದರು.

ರಾಜ್ಯದ ತಯಾರಿ

ಬೆಂಗಳೂರು: ಬಹು ನಿರೀಕ್ಷಿತ ಲಸಿಕೆಯ ವಿತರಣೆಗಾಗಿ ಸಿದ್ಧತೆ ಕೈಗೊಂಡಿರುವ ರಾಜ್ಯ ಸರ್ಕಾರ ಇದರ ಸಂಪೂರ್ಣ ವರದಿಯನ್ನು ಸೆಪ್ಟೆಂಬರ್​ನಲ್ಲೇ ಕೇಂದ್ರಕ್ಕೆ ರವಾನಿಸಿದೆ. ಎಷ್ಟು ಜನ ಕರೊನಾ ವಾರಿಯರ್ಸ್​ಗೆ ಲಸಿಕೆ ನೀಡಬೇಕಾಗಿದೆ ಎಂಬ ವಿವರವನ್ನು ಜಿಲ್ಲಾಧಿಕಾರಿಗಳಿಂದ ಕೇಳಿದೆ. ಅದರ ಜತೆಗೆ ರಾಜ್ಯದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು, ಅಲ್ಲಿರುವ ಸೌಲಭ್ಯಗಳ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದೆ.

  • ಬೃಹತ್ ಕೋಲ್ಡ್ ಸ್ಟೋರೇಜ್​ಗಳು - 10
  • ಬೃಹತ್ ಫ್ರೀಜರ್​ಗಳು- 2
  • ಕೋಲ್ಡ್ ಬಾಕ್ಸ್​ಗಳು- 3426
  • ವ್ಯಾಕ್ಸೀನ್ ಕ್ಯಾರಿಯರ್ ಬಾಕ್ಸ್​ಗಳು -55,347
  • ಒಟ್ಟು ಬಳಕೆಯಲ್ಲಿರುವ ಸ್ಟೆಬಿಲೈಜರ್​ಗಳು- 6144
  • 1 ಬೃಹತ್ ಕೋಲ್ಡ್ ಸ್ಟೋರೇಜ್ ಹಾಗೂ ಫ್ರೀಜರ್ ದುರಸ್ತಿಯಲ್ಲಿವೆ
  • ಕೆಟ್ಟಿರುವ 2 ಬೃಹತ್ ಫ್ರೀಜರ್​ಗಳನ್ನು ಸರಿಪಡಿಸಲಾಗಿದೆ.