ಜಿಲ್ಲೆ

6 ಚುನಾವಣಾ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ : ನ.3ರಂದು ಮತಗಟ್ಟೆ ಸಿಬ್ಬಂದಿಯಾಗಿ ಕಾರ್ಯ

satishvml

ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ನ.3 ರಂದು ನಡೆದ ಉಪಚುನಾವಣೆಯಲ್ಲಿ ಭಾಗವಹಿದ್ದ 6ಚುನಾವಣಾ ಸಿಬ್ಬಂದಿಗೆ ಹಾಗೂ ಕ್ಷೇತ್ರದ 138 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಮಾಸ್ಕ್ ಇಲ್ಲದೆ ಸಂಚಾರ, ಸಾಮಾಜಿಕ ಅಂತರ ಪಾಲನೆ ಉಲ್ಲಂಘನೆ ಮಾಡಲಾಗಿತ್ತು. ಈ ವೇಳೆ ಕರೊನಾ ಸೋಂಕು ಹೆಚ್ಚಾಗಿ ಹರಡಿರುವ ಸಾಧ್ಯತೆಯಿಂದ ನ.6 ರಿಂದ ನ.9 ಮತ್ತು ನ.11 ರಿಂದ ನ.15ರವರೆಗೆ 2 ಹಂತದಲ್ಲಿ ಕೋವಿಡ್ ಪರೀಕ್ಷೆ ಮಾಡಲು ಬಿಬಿಎಂಪಿ ಮುಂದಾಗಿತ್ತು. ನ.3ರ ಮತದಾನ ಪ್ರಕ್ರಿಯೆಯಲ್ಲಿ 5,800 ಚುನಾವಣಾ ಸಿಬ್ಬಂದಿ ಪಾಲ್ಗೊಂಡಿದ್ದರು. ಇದರಲ್ಲಿ 1,438 ಸಿಬ್ಬಂದಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 6 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಕ್ಷೇತ್ರದಲ್ಲಿ 138 ಮಂದಿ ಸೋಂಕು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ 7,171 ಜನರನ್ನು ರ‌್ಯಾಂಡಂ ಆಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 138 ಮಂದಿಗೆ ಸೋಂಕಿರುವುದು ದೃಡಪಟ್ಟಿದೆ. ಇನ್ನು ಮಂಗಳವಾರ ನಡೆಯುವ ಮತ ಎಣಿಕೆ ಕಾರ್ಯದಲ್ಲಿ ಗುಂಪು, ವಿಜಯೋತ್ಸವ, ಪರಸ್ಪರ ಶುಭಾಷಯ ಕೋರಲು ಹೆಚ್ಚು ಜನರು ಒಂದೆಡೆ ಸೇರುವುದು, ಸಂಪರ್ಕ ಮಾಡಿದಲ್ಲಿ ಕರೊನಾ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಯಿದೆ ಎಂದು ಪಾಲಿಕೆ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಸಿಬ್ಬಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ: ಚುನಾವಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯಲ್ಲಿ 4 ಸಾವಿರಕ್ಕೂ ಅಧಿಕ ಜನರು ವಿವಿಧ ಶಾಲಾ-ಕಾಲೇಜಿನ ಶಿಕ್ಷಕರಾಗಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ನೀಡಿರುವ ವರ್ಕ್ ಪ್ರಮ್ ಹೋಮ್ ಕೆಲಸದಲ್ಲಿ ಕಾರ್ಯನಿರತರಾಗಿದ್ದು, ಕೆಲವರು ಬೇರೆ ಸ್ಥಳದಲ್ಲಿ ಕರೊನಾ ವಾರಿಯರಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಕೋವಿಡ್ ಪರೀಕ್ಷೆ ಮಾಡಲು ಸಿಗುತ್ತಿಲ್ಲ. ಆದರೆ, ಮತ ಎಣಿಕೆ ಕಾರ್ಯದ ನಂತರ ಚುನಾವಣೆ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಯನ್ನು ಸಂಪರ್ಕಿಸಿ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದು ಆರ್.ಆರ್. ನಗರ ವಲಯ ಆರೋಗ್ಯಾಧಿಕಾರಿ ಬಾಲಸುಂದರ್ ವಿಜಯವಾಣಿಗೆ ತಿಳಿಸಿದ್ದಾರೆ.