ಜಿಲ್ಲೆ

ರಾಜ್ಯದಲ್ಲಿ ಮತ್ತೊಬ್ಬ ತಹಸೀಲ್ದಾರ್​ರಿಂದ ಕೋವಿಡ್​ ನಿಯಮ ಉಲ್ಲಂಘನೆ; ಕಾನೂನಿಗೂ ಮೀರಿ ಅದ್ಧೂರಿ ಕಾರ್ಯಕ್ರಮ

Webdesk - Ravikanth

ಕೋಲಾರ: ಮಂಡ್ಯದ ತಹಸೀಲ್ದಾರ್ ಚಂದ್ರಶೇಖರ್​ ಶಂಗಾಳಿ ಅವರು ಕರೊನಾ ನಿಯಮ ಉಲ್ಲಂಘಿಸಿದ ನೂರಾರು ಜನರ ಸಮ್ಮುಖದಲ್ಲಿ ಮಗನ ಬರ್ತ್​ ಡೇ ಪಾರ್ಟಿ ಭರ್ಜರಿಯಾಗಿ ಆಚರಿಸಿದ್ದ ವಿಡಿಯೋ ವೈರಲ್​ ಆದ ಬೆನ್ನಿಗೇ ಮತ್ತೊಬ್ಬ ತಹಸೀಲ್ದಾರ್ ಕೋವಿಡ್ ನಿಯಮ ಉಲ್ಲಂಘಿಸಿ ವೈಯಕ್ತಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ಬೆಳಕಿಗೆ ಬಂದಿದೆ.

ಕೋಲಾರದ ನಿರ್ಗಮಿತ ತಹಸೀಲ್ದಾರ್​ ಶೋಭಿತಾ ಅವರು ಕೋವಿಡ್​ ನಿಯಮ ಮೀರಿ ಕಾರ್ಯಕ್ರಮ ಆಯೋಜಿಸಿರುವ ವಿಡಿಯೋ ವೈರಲ್ ಆಗಿದೆ. ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಕೂಗಳತೆ ದೂರದಲ್ಲಿರುವ ನಂದಿನಿ ಪ್ಯಾಲೇಸ್ ಕನ್ವೆನ್ಷನ್​ ಹಾಲ್​​ನಲ್ಲಿ ಶೋಭಿತಾ ತಮ್ಮ ಪೋಷಕರಿಗೆ 60 ವರ್ಷ ತುಂಬಿದ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಅದ್ಧೂರಿಯಾಗಿ ಹೂವಿನ ಅಲಂಕಾರದೊಂದಿಗೆ ದೇವರಿಗೆ ಪೂಜೆ, ಭರ್ಜರಿ ಭೋಜನ ಕೂಟ ಆಯೋಜನೆ ಮಾಡಲಾಗಿದ್ದು, ನೆರೆದವರು ಸಾಮಾಜಿಕ ಅಂತರ ಪಾಲಿಸಿಲ್ಲ, ಮಾಸ್ಕ್ ಧರಿಸಿಲ್ಲ. ಹೀಗೆ ಕೋವಿಡ್ ನಿಯಮ ಉಲ್ಲಂಘಿಸಿದ ದೃಶ್ಯಗಳು ಫೋಟೋ-ವಿಡಿಯೋಗಳಲ್ಲಿ ಸೆರೆಯಾಗಿದೆ. ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಲ್ಲದೆ, ಕಂದಾಯ ಇಲಾಖೆ ಅಧಿಕಾರಿ-ಸಿಬ್ಬಂದಿಯೂ ಭಾಗಿಯಾಗಿದ್ದರು. ಈ ಕುರಿತ ವಿಡಿಯೋಗಳು ವೈರಲ್​ ಆಗಿದ್ದು, ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.