ಆಸ್ಪತ್ರೆಯಲ್ಲಿ ದಾಖಲಾದವರ ಆಕ್ರೋಶ 
ಜಿಲ್ಲೆ

ಆಕ್ಸಿಜನ್ ಸಿಗದೆ ನಾಲ್ವರು ಕೋವಿಡ್ ಸೋಂಕಿತರ ಸಾವು; ಅಲ್ಲೆಲ್ಲೋ ಅಲ್ಲ, ಇಲ್ಲೇ ಕರ್ನಾಟಕದಲ್ಲಿ..!

ಕಲಬುರಗಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಎಂಟು ಮಂದಿ ಕೋವಿಡ್ ಸೋಂಕಿತರು ಮೃತಪಟ್ಟ ಬೆನ್ನಿಗೆ ಕರ್ನಾಟಕದಲ್ಲೂ ಅಂಥದ್ದೇ ದುರಂತ ಸಾವಿನ ಪ್ರಕರಣ ಕಂಡುಬಂದಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಒಬ್ಬರಲ್ಲ ನಾಲ್ವರು ಕೊನೆಯುಸಿರೆಳೆದಿದ್ದಾರೆ.

ಕಲಬುರಗಿಯ ಕೆಬಿಎನ್​ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಈ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತ ಹಲವರು ಚಿಕಿತ್ಸೆ ಪಡೆಯುತ್ತಿದ್ದು, ಆ ಪೈಕಿ ನಾಲ್ವರಿಗೆ ಆಕ್ಸಿಜನ್ ಕೊರತೆಯಾಗಿದೆ. ಚಿಕಿತ್ಸೆಯಲ್ಲಿರುವಾಗಲೇ ದಾಸ್ತಾನು ಮುಗಿದ ಕಾರಣ, ಈ ನಾಲ್ವರು ಉಸಿರಾಟದ ಸಮಸ್ಯೆ ತೀವ್ರಗೊಂಡು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಸತತ ಮೂರೂ ದಿನ 200ಕ್ಕೂ ಅಧಿಕ ಮಂದಿ ಕೋವಿಡ್​ನಿಂದ ಮೃತಪಟ್ಟಿದ್ದು, ಇವತ್ತೊಂದೇ ದಿನ 271 ಜನರು ಕರೊನಾಗೆ ಬಲಿಯಾಗಿದ್ದಾರೆ. ಮತ್ತೊಂದೆಡೆ 40,990 ಪ್ರಕರಣ ಇಂದು ಹೊಸದಾಗಿ ದೃಢಪಟ್ಟಿದ್ದು, ಸೋಂಕು ವ್ಯಾಪಿಸುತ್ತಲೇ ಇರುವುದರಿಂದ ಈಗಾಗಲೇ ಉಂಟಾಗಿರುವ ಆಕ್ಸಿಜನ್, ಐಸಿಯು ಹಾಗೂ ಬೆಡ್ ಕೊರತೆ ಸಮಸ್ಯೆಗಳು ಮತ್ತಷ್ಟು ಕಗ್ಗಂಟಾಗುತ್ತಲೇ ಇವೆ.