ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತನೊಬ್ಬ ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಗಾಯಾಳು ಬೆಳ್ತಂಗಡಿ ತಾಲೂಕಿನ ಕಲ್ಲಮುಂಡ್ಕೂರು ನಿವಾಸಿ 30ರ ಹರೆಯದ ಯುವಕ. ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಈತ ಆಸ್ಪತ್ರೆಗೆ ದಾಖಲಾಗಿದ್ದ. ಮಹಡಿಯಿಂದ ಬಿದ್ದು ತಲೆಗೆ ಪೆಟ್ಟಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ತಕ್ಷಣ ಆತನನ್ನು ಕರೆದೊಯ್ದು ತಪಾಸಣೆ ನಡೆಸಿದರು.
ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಪ್ರತ್ಯೇಕ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ದಾಖಲಾದ ಬಳಿಕ ಸರಿಯಾಗಿ ಯಾರ ಜತೆಗೂ ವ್ಯವಹರಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.