ಕಂಪ್ಲಿ: ಕೋವಿಡ್ ಹೊಸ ತಳಿ ಒಮಿಕ್ರಾನ್ ಕಾರಣ ಡಿ.13ರಂದು ನಡೆಯಬೇಕಿದ್ದ ಪಟ್ಟಣದ ಆರಾಧ್ಯದೈವ ಶ್ರೀಪೇಟೆ ಬಸವೇಶ್ವರ ರಥೋತ್ಸವ ರದ್ದುಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜೌಕೀನ ಸತೀಶ್ ತಿಳಿಸಿದರು. ಇಲ್ಲಿನ ಶ್ರೀಪೇಟೆ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಈ ಬಾರಿ ಬಸವೇಶ್ವರ ರಥೋತ್ಸವವನ್ನು ಸಂಭ್ರಮದಿಂದ ಆಚರಿಸಲು ಡಿ.3ರಂದು ತೇರಿನ ಮನೆಯಿಂದ ರಥವನ್ನು ಹೊರ ತೆಗೆದಿದ್ದೆವು. ರಥೋತ್ಸವದ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದೆವು. ಆದರೆ, ಪೊಲೀಸರ ಸೂಚನೆಯಂತೆ ಒಮಿಕ್ರಾನ್ ವೈರಾಣು ತಡೆಗಾಗಿ ಡಿ.12ರ ರಾತ್ರಿ ನಡೆಯಬೇಕಿದ್ದ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಡಿ.13ರ ಬಸವೇಶ್ವರ ರಥೋತ್ಸವವನ್ನು ರದ್ದುಗೊಳಿಸಿದ್ದು, ಭಕ್ತರು ಸಹಕರಿಸಬೇಕೆಂದು ಕೋರಿದರು.
ಸಭೆಯಲ್ಲಿ ಮಂಡಳಿ ಅಧ್ಯಕ್ಷ ಡಿ.ವೀರಪ್ಪ, ಧರ್ಮಕರ್ತ ಚಿನ್ನದಕಂತಿ ಶಿವಮೂರ್ತಿಸ್ವಾಮಿ, ಪದಾಧಿಕಾರಿಗಳಾದ ಮಣ್ಣೂರು ಶರಣಪ್ಪ, ವಸ್ತ್ರದ ಜಡೆಯ್ಯಸ್ವಾಮಿ, ಬಂಡೆಯ್ಯಸ್ವಾಮಿ, ಯು.ಎಂ.ವಿದ್ಯಾಶಂಕರ್, ಸಜ್ಜನರ ಮಂಜುನಾಥ, ಅರವಿ ಅಮರೇಶಗೌಡ, ಮಣ್ಣೂರು ನವೀನ್, ಎಚ್.ಎಸ್.ವೀರೇಶ್, ನಂದಿಕೋಲು ಶಿವಪ್ರಸಾದ್, ಬಿ.ಶಿವಾನಂದ ಇತರರಿದ್ದರು.