ಜಿಲ್ಲೆ

15 ದಿನದಲ್ಲಿ 2 ಸಾವಿರ ಟೆಸ್ಟ್

Dakshina Kannada

ವೇಣುವಿನೋದ್ ಕೆ.ಎಸ್ ಮಂಗಳೂರು

ನಗರದಲ್ಲಿ 15 ದಿನಗಳ ಹಿಂದೆಯಷ್ಟೇ ಕಾರ್ಯಾರಂಭ ಮಾಡಿದ ಅತ್ಯಾಧುನಿಕ ಜಿಲ್ಲಾ ವೈರಾಲಜಿ ಲ್ಯಾಬ್ ಈವರೆಗೆ 2ಸಾವಿರ ಕರೊನಾ ಟೆಸ್ಟ್ ನಡೆಸುವ ಮೂಲಕ ಗಮನಾರ್ಹ ಸಾಧನೆ ತೋರಿದೆ.
ಜಿಲ್ಲೆಯಲ್ಲಿ ಮೊದಲ ಕೊವಿಡ್ ಪ್ರಕರಣ ವರದಿಯಾಗುವ ಮೊದಲೇ, ಮಂಗಳೂರಿಗೆ ಅತ್ಯಾಧುನಿಕ ಲ್ಯಾಬ್ ಬೇಕೆನ್ನುವ ಬೇಡಿಕೆ ಸಿದ್ಧಗೊಂಡಿತ್ತು. ಮಾ.23ರಂದು ಯೋಜನೆ ರೂಪುಗೊಂಡಿದ್ದು, ಏ.2ರಂದು 10 ದಿನಗಳಲ್ಲಿ ಕೆಲಸಗಳು ಪೂರ್ಣಗೊಂಡವು. 5ರಂದು ಇದರ ಪರಿಶೀಲನೆಯೂ ಮುಗಿದು, 7ರಂದು ಕೆಲಸ ಮಾಡಲು ಶುರುವಾಗಿತ್ತು. ಹೀಗೆ ಕಳೆದ 15 ದಿನಗಳ ಹಿಂದೆ ಜಿಲ್ಲಾ ವೈರಾಲಜಿ ಪ್ರಯೋಗಾಲಯ ಈವರೆಗೆ 2000 ಕರೊನಾ ಟೆಸ್ಟ್ ನಡೆಸುವ ಮೂಲಕ ಗಮನಾರ್ಹ ನಿರ್ವಹಣೆ ತೋರಿದೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದಲೂ ಸ್ಯಾಂಪಲ್‌ಗಳು ಈ ಲ್ಯಾಬ್‌ಗೆ ಬರುತ್ತಿವೆ. ತುರ್ತಾಗಿ ಮಾಡುವುದಾದರೆ 7ರಿಂದ 8 ಗಂಟೆಯಲ್ಲಿ ಒಂದು ಕರೊನಾ ಪಾಸಿಟಿವ್ ಕೇಸ್‌ನ ವರದಿ ಡಾಟಾ ಸಹಿತ ನೀಡುವುದು ಸಾಧ್ಯ.

ಲ್ಯಾಬ್ ಯಾವ ರೀತಿ ಕಾರ್ಯವೆಸಗುತ್ತಿದೆ , ಒಂದು ಸ್ಯಾಂಪಲ್ ಪರೀಕ್ಷೆಗೆ , ವರದಿಗೆ ಎಷ್ಟು ಸಮಯ ಬೇಕು ? ಟೆಸ್ಟ್ ವಿಧಾನಗಳು ಹೇಗಿದೆ ಎನ್ನುವುದು ಕುತೂಹಲದ ವಿಚಾರಗಳೇ. ಈ ಎಲ್ಲ ವಿಚಾರಗಳ ಬಗ್ಗೆ ಈ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊವಿಡ್ ಹೀರೋಗಳು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿರುವ ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ.

ಪ್ರಾಥಮಿಕ ಹಾಗೂ ಪಿಸಿಆರ್ ಎರಡು ರೀತಿಯ ಟೆಸ್ಟ್
ಲ್ಯಾಬ್‌ಗೆ ಬರುವಂತಹ ಸ್ಯಾಂಪಲ್‌ಗಳನ್ನು ಎರಡು ರೀತಿಯಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಮೊದಲನೆಯದ್ದು ಪ್ರಾಥಮಿಕ ಟೆಸ್ಟ್. ಇದರಲ್ಲಿ ನೆಗೆಟಿವ್ ಬಂದರೆ ಎರಡನೇ ಟೆಸ್ಟ್‌ಗೆ ಹೋಗಬೇಕಾಗಿಲ್ಲ. ಈ ಪ್ರಾಥಮಿಕ ಹಂತದ ಟೆಸ್ಟ್‌ನಲ್ಲಿ ಇ-ಜೀನ್ ಕಂಡು ಬಂದರೆ ಮಾತ್ರವೇ ವುಹಾನ್ ಕರೊನಾ(ನೋವೆಲ್ ಕರೊನಾ) ಪತ್ತೆ ಮಾಡುವ ಎರಡನೇ ಹಂತಕ್ಕೆ ಹೋಗುತ್ತಾರೆ. ಅಂದರೆ ಇದಕ್ಕೆ ರಿಯಲ್‌ಟೈಂ ಪಿಸಿಆರ್(ಪಾಲಿಮರೈಸ್ಡ್ ಚೈನ್ ರಿಯಾಕ್ಷನ್)ಟೆಸ್ಟ್ ಎನ್ನಲಾಗುತ್ತದೆ. ಇದರಲ್ಲಿ ಸ್ಯಾಂಪಲ್‌ನಲ್ಲಿರುವುದು ನೋವೆಲ್ ಕರೊನಾ ವೈರಸ್ ಹೌದೇ ಅಲ್ಲವೇ ಎನ್ನುವುದನ್ನು ದೃಢಪಡಿಸಲಾಗುತ್ತದೆ ಎನ್ನುತ್ತಾರೆ ಲ್ಯಾಬ್‌ನ ನೋಡಲ್ ಅಧಿಕಾರಿ ಡಾ.ಶರತ್ ಕುಮಾರ್.

ಹೆಚ್ಚುತ್ತಿದೆ ಸ್ಯಾಂಪಲ್ ಸಂಖ್ಯೆ
ಪ್ರಾರಂಭದ ಒಂದೆರಡು ದಿನ 10-15 ಸ್ಯಾಂಪಲ್‌ಗಳಷ್ಟೇ ಬರುತ್ತಿದ್ದರೆ ಈಗ 200, 300 ಸ್ಯಾಂಪಲ್‌ಗಳವರೆಗೂ ಬರುತ್ತಿದೆ. ಇಲ್ಲಿ ಕೆಲಸದ ಒತ್ತಡ ಹೆಚ್ಚಾದರೆ ಬೆಂಗಳೂರಿನಿಂದಲೇ ಇಲ್ಲಿನ ಸ್ಯಾಂಪಲ್‌ಗಳನ್ನು ಬೇರೆ ಕಡೆಗೆ(ಹಾಸನ/ಮೈಸೂರು) ಕಳುಹಿಸಲಾಗುತ್ತದೆ. ಸದ್ಯ ಎರಡು ಪಾಳಿಗಳಲ್ಲಿ ಇಲ್ಲಿನ ಸಿಬ್ಬಂದಿ ಟೆಸ್ಟ್ ನಡೆಸುತ್ತಿದ್ದರೆ ಶೀಘ್ರವೇ ಇದು ದಿನದ 24 ಗಂಟೆ ಕಾರ್ಯವೆಸಗಲಿದೆ.

ಸರಾಸರಿ 8 ಗಂಟೆ
ಪ್ರಾಥಮಿಕ ಪರೀಕ್ಷೆಯಲ್ಲಿ ಫಲಿತಾಂಶ ಬರುವುದಕ್ಕೆ 5 ಗಂಟೆ ಬೇಕಾಗುತ್ತದೆ. ಒಂದು ವೇಳೆ ಇ-ಜೀನ್ ದೃಢಪಟ್ಟರೆ ಮುಂದಿನ ಹಂತಕ್ಕೆ ಹೋಗುತ್ತಾರೆ, ವೈರಸ್ ಎಕ್ಸ್‌ಟ್ರಾಕ್ಶನ್ ಮಾಡಲು ಒಂದು ಗಂಟೆ ಬೇಕು, ಬಳಿಕ ಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ಇದೆಲ್ಲ ಸೇರಿ ವರದಿ ಸಿದ್ಧಪಡಿಸುವಾಗ 8 ಗಂಟೆ ಬೇಕಾಗಬಹುದು ಎನ್ನುತ್ತಾರೆ ಲ್ಯಾಬ್‌ನ ಮೈಕ್ರೋಬಯೊಲಾಜಿಸ್ಟ್ ಡಾ.ಮಧುಸೂದನ್.

ಆಧುನಿಕ ಉಪಕರಣಗಳು
ಈ ಲ್ಯಾಬ್‌ನಲ್ಲಿ ಅತ್ಯಾಧುನಿಕ ಬಯೋಸೇಫ್ಟಿ ಕ್ಯಾಬಿನೆಟ್, ವೈರಾಣು ಹರಡದಂತೆ ಸೋಸಿ ತೆಗೆದು ಉರಿಸುವ ಲ್ಯಾಮಿನಾರ್ ಏರ್‌ಫ್ಲೋ, ಎಕ್ಸ್‌ಟ್ರಾಕ್ಶನ್ ಮಷಿನ್, ಸಾಮಾನ್ಯ ರೆಫ್ರಿಜರೇಟರ್‌ಗಳು, ಮೈನಸ್ 20 ಡಿಗ್ರಿ/ಮೈನಸ್ 80 ಡಿಗ್ರಿಯಷ್ಟು ಶೈತ್ಯ ಹೊಂದಿರುವ ಫ್ರಿಜ್‌ಗಳು ಇಲ್ಲಿವೆ.

ಹಲವರ ಸಹಕಾರದಿಂದ ಸಾಧ್ಯವಾಯಿತು
ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಸೆಲ್ವಮಣಿ ಅವರ ಉತ್ಸಾಹದಿಂದ ಇದು ಬೇಗನೆ ಕಾರ್ಯಾರಂಭಿಸಿದೆ. ಪ್ರಸ್ತುತ ಡಾ.ಶರತ್ ಕುಮಾರ್ ನೇತೃತ್ವ ವಹಿಸಿದ್ದು, ಡಾ.ಮಧುಸೂದನ್, ಎಂಇಎಸ್ ಕಾಲೇಜಿನ ಡಾ.ರಾಮಕೃಷ್ಣ, ಫಾದರ್ ಮುಲ್ಲರ್ಸ್‌ ಕಾಲೇಜಿನ ಡಾ.ಅನೂಪ್ ಸಹಿತ ತಂತ್ರಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ, ಡಾ.ರಾಜುಕೃಷ್ಣ, ಎನ್‌ಐಟಿಕೆ ಸುರತ್ಕಲ್‌ನ ಡಾ.ಗಂಗಮ್ಮ ಮುಂತಾದವರು ಹಲವು ಉಪಕರಣಗಳನ್ನು ಒದಗಿಸಿಕೊಟ್ಟಿದ್ದಾರೆ. ಯೆನಪೋಯ ಮೆಡಿಕಲ್ ಕಾಲೇಜಿನ ಡಾ.ಅರುಣ್ ಭಾಗವತ್, ಡಾ.ವಿದ್ಯಾ ಅಲ್ಲದೆ ಶ್ರೀನಿವಾಸ ಮೆಡಿಕಲ್ ಕಾಲೇಜು ಹಾಗೂ ಕಣಚೂರು ಮೆಡಿಕಲ್ ಕಾಲೇಜಿನ ವೈದ್ಯರ ತಂಡವೂ ಲ್ಯಾಬ್‌ಗೆ ಸಹಕಾರ ನೀಡುತ್ತಿದೆ.

ಎಮರ್ಜೆನ್ಸಿ ಕೇಸ್‌ಗೆ ಆದ್ಯತೆ
ಸಾಮಾನ್ಯವಾಗಿ ಮೊದಲು ಬಂದ ಸ್ಯಾಂಪಲ್ ಮೊದಲು ಪರೀಕ್ಷೆ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಮಧ್ಯೆ ತುರ್ತಾಗಿ ಪರೀಕ್ಷೆ ಆಗಬೇಕಾದ ಪ್ರಕರಣಗಳು ಬರುತ್ತವೆ. ಆಗ ಅವುಗಳನ್ನು ಮೊದಲು ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಕೆಲವೊಮ್ಮೆ ಸಾಮಾನ್ಯ ಸ್ಯಾಂಪಲ್‌ಗಳ ಪರೀಕ್ಷೆ ತಡವಾಗುವುದಿದೆ.

ರ‌್ಯಾಪಿಡ್ ಕಿಟ್ ವರ್ಸಸ್ ಪಿಸಿಆರ್ ಟೆಸ್ಟ್
ಸದ್ಯ ವಿಶ್ವದೆಲ್ಲೆಡೆ ಪ್ರಚಲಿತವಿರುವ, ವೈರಸ್ ಗಂಟಲಿಗೆ ಬಂದಾಗಲೇ ಬೇಗ ಪತ್ತೆ ಮಾಡುವ ವಿಧಾನವನ್ನೇ ಲ್ಯಾಬ್‌ನಲ್ಲಿ ಅನುಸರಿಸಲಾಗುತ್ತಿದೆ. ಆದರೆ ರ‌್ಯಾಪಿಡ್ ಟೆಸ್ಟ್ ಕಿಟ್‌ಗಳು ಈಗ ಭಾರತಕ್ಕೆ ಬಂದರೂ ಇನ್ನೂ ಮಂಗಳೂರಿಗೆ ಬಂದಿಲ್ಲ. ರ‌್ಯಾಪಿಡ್ ಟೆಸ್ಟ್‌ನಲ್ಲಿ 15ರಿಂದ 20 ನಿಮಿಷದಲ್ಲಿ ವರದಿ ಸಿಗುತ್ತದೆ. ಪಿಸಿಆರ್ ಟೆಸ್ಟ್‌ನಲ್ಲಿ ಗಂಟಲ ದ್ರವದ ಪರೀಕ್ಷೆ ನಡೆಯುತ್ತದೆ, ರ‌್ಯಾಪಿಡ್‌ನಲ್ಲಿ ರಕ್ತದಲ್ಲಿ ಕರೊನಾ ವೈರಸ್ ಎದುರಿಸುವ ಆ್ಯಂಟಿ ಬಾಡಿಗಳಿವೆಯೇ ಎಂದು ನೋಡಲಾಗುತ್ತದೆ.